

ತುಮಕೂರು: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗೋದು ಖಚಿತ. ಅವರು ಮುಖ್ಯಮಂತ್ರಿ ಆದ್ರೆ ಕುಣಿಗಲ್ಗೆ ನಾನೇ ಮುಖ್ಯಮಂತ್ರಿ ಎಂದಿದ್ದ ಕುಣಿಗಲ್ ಕ್ಷೇತ್ರದ ಶಾಸಕ ಡಾ. ಎಚ್.ಡಿ.ರಂಗನಾಥ್, ಇದೀಗ ತಮ್ಮ ಹೇಳಿಕೆಯನ್ನೇ ಬದಲಾಯಿಸಿದರು.
ನಗರದ ಜಿಪಂ ಕಚೇರಿಯಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಡಾ.ರಂಗನಾಥ್, ಕುಣಿಗಲ್ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬರಲಿದೆ ಎಂದು ಹೇಳುವಾಗ ಡಿ.ಕೆ.ಶಿವಕುಮಾರ್ರ ಹೇಸರನ್ನು ಹೇಳಿದ್ದೇ ಅಷ್ಟೆ. ಸಿದ್ದರಾಮಯ್ಯ ಸಿಎಂ ಆದರೂ ನಮಗೇನು ತೊಂದರೆಯಿಲ್ಲ. ಬಿಜೆಪಿ ಸರ್ಕಾರದಲ್ಲಿ ಕುಣಿಗಲ್ ತಾಲೂಕಿಗೆ ಭಾರೀ ಅನ್ಯಾಯವಾಗಿದೆ. ಕ್ಷೇತ್ರಕ್ಕೆ ಒಂದು ಸಾವಿರ ಕೋಟಿ ಅನುದಾನ ನಷ್ಟವಾಗಿದೆ. ಸರ್ಕಾರ ತಾರತಮ್ಯ ಮಾಡುತ್ತಿದೆ. ಈ ನೋವನ್ನು ವ್ಯಕ್ತಪಡಿಸುತ್ತಿದ್ದೇನೆ. ರೈತರಿಗೆ ಬೇಕಿರುವುದು ನೀರು, ಭೂಮಿ, ರಸ್ತೆ. 614 ಕೋಟಿ ರೂ. ಅನುದಾನವನ್ನು ಈ ಸರ್ಕಾರ ಕಸಿದುಕೊಂಡಿದೆ. ಈ ನೋವಿನಿಂದಲೇ ನಾನು ಆ ರೀತಿ ಹೇಳಿದ್ದು. ಕಳೆದ ಬಾರಿ ಕಾಂಗ್ರೆಸ್ ಸರ್ಕಾರ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಅಭಿವೃದ್ಧಿ ದೃಷ್ಟಿಯಿಂದ ಮುಂದೆ ಕಾಂಗ್ರೆಸ್ ಸರ್ಕಾರ ಬರುತ್ತದೆ. ಕುಣಿಗಲ್ಗೆ ನಾನೇ ಸಿಎಂ ಅಂದಿದ್ದು ನಿಜ ಎಂದರು.
ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿಯಾಗಲು ಮೂರ್ನಾಲ್ಕು ಜನರ ಹೆಸರಿದೆ. ಮಾತಿನ ಭರದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಬಂತು. ಮುಖ್ಯಮಂತ್ರಿ ಯಾರೇ ಆದರೂ ಕುಣಿಗಲ್ನಲ್ಲಿ ಅಭಿವೃದ್ಧಿಯಾಗಲಿದೆ ಎಂದರು.
ಕುಣಿಗಲ್ ತಾಲೂಕಿನ ಹಳ್ಳಿಯೊಂದರಲ್ಲಿ ರಸ್ತೆ ಸಮಸ್ಯೆ ಬಗ್ಗೆ ಹೇಳಿಕೊಂಡ ಜನರಿಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡುತ್ತಾ ಡಾ.ಎಚ್.ಡಿ.ರಂಗನಾಥ್, ''ನಿಮಗೆಲ್ಲಾ ಸವಾಲು ಬರುತ್ತದೆ. ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವಂತೆ ಕಾಂಗ್ರೆಸ್ಗೆ ಮತ ಹಾಕಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ಗೆ ಬೆಂಬಲ ಕೊಡಿ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆದ ಬಳಿಕ ಖಂಡಿತಾ ಕುಣಿಗಲ್ ಅಭಿವೃದ್ಧಿ ಆಗುತ್ತದೆ. ಅವರು ಸಿಎಂ ಆದರೆ ಕುಣಿಗಲ್ಗೆ ನಾನೇ ಮುಖ್ಯಮಂತ್ರಿ ಆದಂತೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ನಿಮ್ಮೂರಿಗೆ ರಸ್ತೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವೆ'' ಎಂದು ರಂಗನಾಥ್ ಹೇಳಿರುವ ವಿಡಿಯೋ ವೈರಲ್ ಆಗಿತ್ತು.
ಎಸ್ಪಿಎಂ ಬಗ್ಗೆ ಮಾತಾಡಲ್ಲ: ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ ಎಂದು ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಘೋಷಿಸಿದ್ದಾರೆ. ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ.ರಂಗನಾಥ್, ''ಮುದ್ದಹನುಮೇಗೌಡರು ಹಿರಿಯರು. ಅವರ ಬಗ್ಗೆ ನಾನು ಮಾತಾಡಲ್ಲ. ನಾಲ್ಕು ವರ್ಷದಿಂದ ನನಗೆ ಕೊಟ್ಟ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ವರಿಷ್ಠರು, ಹಿರಿಯರು, ಪಕ್ಷದ ನಾಯಕರು, ಮತದಾರರ ಆದೇಶ ಶಿರಸಾವಹಿಸಿ ಪಾಲಿಸುತ್ತೇನೆ'' ಎಂದರು.