

ಕುಣಿಗಲ್: ಮಾರ್ಕೋನಹಳ್ಳಿ ಜಲಾಶಯದ ನೀರಲ್ಲಿ ಕಾರು ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದ ಮೂವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಮಾರ್ಕೋನಹಳ್ಳಿ ಜಲಾಶಯ 2ನೇ ಬಾರಿ ಭರ್ತಿಯಾಗಿದ್ದು, ಮಂಗಳವಾರ ರಾತ್ರಿ ಸ್ವಯಂ ಚಾಲಿತ ಎರಡು ಗೇಟ್ಗಳಲ್ಲಿ ಕೋಡಿ ನೀರು ನಾಗಮಂಗಲಕ್ಕೆ ಹೋಗುವ ರಸ್ತೆಯ ಸೇತುವೆ ಮೇಲೆ ಹರಿಯುತ್ತಿತ್ತು. ಬೆಂಗಳೂರಿನಿಂದ ಮಾರ್ಕೋನಹಳ್ಳಿ ಜಲಾಶಯದ ಸೇತುವೆ ಮಾರ್ಗವಾಗಿ ನಾಗಮಂಗಲ ತಾಲೂಕಿನ ಜಪ್ಪನಹಳ್ಳಿಗೆ ಮೂವರು ಬುಧವಾರ ಮುಂಜಾನೆ 3.30ರಲ್ಲಿ ಕಾರಿನಲ್ಲಿ ತೆರಳುತ್ತಿದ್ದರು.
ಜಲಾಶಯದ ನೀರು ಸೇತುವೆ ಮೇಲೆ ಹರಿಯುವುದನ್ನು ತಿಳಿಯದ ಕಾರು ಚಾಲಕ ಮುಂದಕ್ಕೆ ಚಲಿಸಿದ್ದು, ನೀರಿನ ರಭಸಕ್ಕೇ ಕಾರು ನೀರಿನಲ್ಲಿ ಕೊಚ್ಚಿಕೊಂಡು ಬಹು ದೂರ ಹೋಗಿತ್ತು. ಕಾರಿನಲ್ಲಿದ್ದ ಮೂವರು ಕಂಗಾಲಾಗಿದ್ದರು. ಇದನ್ನು ಗಮನಿಸಿದ ಜಲಾಶಯದ ಗಾರ್ಡ್ ತಕ್ಷಣ ಕುಣಿಗಲ್ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದರು. ಅಗ್ನಿಶಾಮಕ ಸಿಬ್ಬಂದಿ ಕಾರಿನಲ್ಲಿದ್ದ ಮೂವರನ್ನು ರಕ್ಷಿಸಿ ಸ್ಥಳೀಯರ ಸಹಕಾರದಿಂದ ಜೆಸಿಬಿ ಯಂತ್ರ ಬಳಸಿ ಕಾರನ್ನು ಮೇಲಕ್ಕೆತ್ತಿದರು.