

ಮೈಸೂರು: ದ್ವಿತೀಯ ಹಾಗೂ ಅಂತಿಮ ವರ್ಷದ ಪದವಿ, ಅಂತಿಮ ವರ್ಷದ ಸ್ನಾತಕೋತ್ತರ ಪದವಿ ಪ್ರವೇಶ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿ ವಿದ್ಯಾರ್ಥಿಗಳ ಆಕ್ರೋಶಕ್ಕೆ ಗುರಿಯಾಗಿದ್ದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು) ಇದೀಗ ಎಚ್ಚೆತ್ತುಕೊಂಡು ಶುಲ್ಕ ಇಳಿಕೆ ಮಾಡಿದೆ.
ಪ್ರವೇಶ ಶುಲ್ಕ ಹೆಚ್ಚಳ ಕುರಿತು ‘ವಿಜಯವಾಣಿ’ ಅ.19ರ ಸಂಚಿಕೆಯಲ್ಲಿ ‘ವಿದ್ಯಾರ್ಥಿಗಳಿಗೆ ಗಗನ ಕುಸುಮವಾದ ಕೆಎಸ್ಒಯು’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿ, ಗಮನ ಸೆಳೆಯಲಾಗಿತ್ತು. ಪತ್ರಿಕೆಗೆ ಪ್ರತಿಕ್ರಿಯಿಸಿದ್ದ ಕುಲಪತಿ ಡಾ.ಎಸ್.ವಿದ್ಯಾಶಂಕರ್, ಶುಲ್ಕ ಕಡಿಮೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ, ಅ.20ರಂದು ಪ್ರಥಮ ವರ್ಷದ ಪ್ರವೇಶ ಶುಲ್ಕ ಹೊರತುಪಡಿಸಿ ಈಗಾಗಲೆ ಪ್ರವೇಶ ಪಡೆದಿರುವ ದ್ವಿತೀಯ, ಅಂತಿಮ ಬಿಎ, ಬಿಕಾಂ, ಬಿಎಸ್ಸಿ, ಅಂತಿಮ ಎಂಎ, ಎಂಕಾಂ, ಎಂಎಸ್ಸಿ ಪ್ರವೇಶ ಶುಲ್ಕ ಕಡಿಮೆ ಮಾಡಲಾಗಿದೆ.
ಈ ಮೊದಲು ಎಂಎ ಅಂತಿಮ ವರ್ಷದ ಪ್ರವೇಶಕ್ಕೆ 9,500 ರೂ. ನಿಗಿದಿಪಡಿಸಿತ್ತು, ಇದೀಗ 6,100 ರೂ.ಗೆ ಇಳಿಕೆ ಮಾಡಿದೆ. ಎಂಎ ಪತ್ರಿಕೋದ್ಯಕ್ಕೆ 14,300 ರೂ.ಗಳಿಂದ 10,550 ರೂ.ಗೆ ಇಳಿಸಲಾಗಿದೆ. ಅದೇ ರೀತಿ ದ್ವಿತೀಯ, ತೃತೀಯ ಬಿಎಗೆ ನಿಗದಿಪಡಿಸಿದ್ದ 7,550 ರೂ. ಬದಲು 4,950 ರೂ. ನಿಗದಿಪಡಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಿದೆ. ಜತೆಗೆ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಹಿಂದಿನಂತೆ ಶೇ.15 ರಿಯಾಯಿತಿ ದೊರೆಯಲಿದೆ. ವಿದ್ಯಾರ್ಥಿಗಳು ಆನ್ಲೈನ್ ಮೂಲಕವೇ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದಾಗಿದೆ.
ಹೊಸದಾಗಿ ಪ್ರವೇಶ ಪಡೆಯುವವರಿಗೆ ಶುಲ್ಕದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದ್ದರಿಂದ ಪ್ರಥಮ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪ್ರವೇಶ ಶುಲ್ಕ ಇಳಿಕೆಗೂ ಕ್ರಮ ವಹಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.