

ಶಿವಮೊಗ್ಗ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ಸಿಂಗ್ ಗೆಲ್ಲಲು ಹಾಗೂ ಕಾಂಗ್ರೆಸ್ನ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಮತ್ತು ಜೆಡಿಎಸ್ನ ಕುಪೇಂದ್ರ ರೆಡ್ಡಿ ಸೋಲಿನಲ್ಲಿ ಮಾಜಿ ಸಿದ್ದರಾಮಯ್ಯ ಅವರ ಪಾತ್ರ ಪ್ರಮುಖ. ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ ಸಿದ್ದರಾಮಯ್ಯ ಅವರಿಗೆ ಥ್ಯಾಂಕ್ಸ್...
ಹೀಗೆಂದು ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಮುಸ್ಲಿಮರ ಬಗ್ಗೆ ಕಾಂಗ್ರೆಸ್ಗೆ ಇರುವ ಕಳಕಳಿ ಏನು ಎಂಬುದು ರಾಜ್ಯಸಭಾ ಚುನಾವಣೆಯಲ್ಲಿ ಜಗಜ್ಜಾಹಿರಾಗಿದೆ. ಅಲ್ಪಸಂಖ್ಯಾತರ ಮೇಲಿನ ಪ್ರೀತಿ ಕೇವಲ ನಾಟಕ, ಸೋಲು ಖಚಿತ ಎಂಬುದು ಗೊತ್ತಿದ್ದರೂ ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕಿಳಿಸಿ ವಿಶ್ವಾಸ ದ್ರೋಹ ಬಗೆದಿದ್ದಾರೆ. ಬಿಜೆಪಿಯನ್ನು ಕೋಮುವಾದಿ ಎಂದು ಟೀಕಿಸುವ ಮುಸ್ಲಿಮರು ಮತ್ತು ಪ್ರಗತಿಪರರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಕೋಮುವಾದಿ ಪಕ್ಷ ಎಂಬುದನ್ನು ಯಾರೂ ಒಪ್ಪಲ್ಲ, ಸ್ವತಃ ಕಾಂಗ್ರೆಸ್ ಪಕ್ಷದವರೇ ಈ ಮಾತನ್ನು ಒಪ್ಪುತ್ತಿಲ್ಲ ಎಂದ ಈಶ್ವರಪ್ಪ, ಲೆಹರ್ ಸಿಂಗ್ ಗೆಲುವಿಗೆ ಸಹಕರಿಸಿದ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸುವೆ ಎಂದು ಕುಟುಕಿದರು.
ಕಾಂಗ್ರೆಸ್ ಕೋಮುವಾದಿ ಮತ್ತು ರಾಷ್ಟ್ರದ್ರೋಹಿ. ಸಿದ್ದರಾಮಯ್ಯ ಆ ಪಕ್ಷದಲ್ಲಿದ್ದಾರೆ. ನಾನು ಬಿಜೆಪಿಯಿಂದ ಬೆಳೆದು ಬಂದಿದ್ದೇನೆಯೇ ವಿನಃ ಸಿದ್ಧರಾಮಯ್ಯ ಕೃಪಾಕಟಾಕ್ಷದಿಂದಲ್ಲ. ಬಿಜೆಪಿ ನನ್ನನ್ನು ಸಾಮಾನ್ಯ ಕಾರ್ಯಕರ್ತನಿಂದ ಉಪ ಮುಖ್ಯಮಂತ್ರಿವರೆಗೂ ಬೆಳೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.