ಮದರಸಾದಿಂದ ಬರುವಾಗ ಬಾಲಕನಿಗೆ ಹಲ್ಲೆ: ಎಷ್ಟೇ ಓದಿದ್ರೂ ಅರ್ಥ ಆಗ್ತಿರ್ಲಿಲ್ಲ, ಶಾಲೇಲೂ ಸ್ನೇಹಿತರಿರಲಿಲ್ಲ... ಸತ್ಯಾಂಶ ಬಯಲು

kidnap
Published on

ಮಂಗಳೂರು: ಮದರಸಾದಿಂದ ಮನೆಗೆ ತೆರಳುತ್ತಿದ್ದ 13 ವರ್ಷದ ಬಾಲಕನಿಗೆ ಬೈಕ್​ನಲ್ಲಿ ಬಂದ ಇಬ್ಬರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂಬ ಪ್ರಕರಣದ ಅಸಲಿ ಕತೆ ಬಯಲಾಗಿದೆ.

ಕೃಷ್ಣಾಪುರದಲ್ಲಿ ಜೂ.27ರಂದು ರಾತ್ರಿ 9.30ಕ್ಕೆ ಮದ್ರಸಾದಿಂದ ಮನೆಗೆ ತೆರಳುತ್ತಿದ್ದ 13 ವರ್ಷದ ಬಾಲಕನಿಗೆ ಬೈಕ್​ನಲ್ಲಿ ಬಂದ ಇಬ್ಬರು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಸುರತ್ಕಲ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಸುರತ್ಕಲ್​ ಪೊಲೀಸರು ಬಾಲಕನನ್ನು ವಿಚಾರಣೆ ನಡೆಸಿದಾಗ ಬಾಲಕನಿಗೆ ಓದಿನಲ್ಲಿ ಆಸಕ್ತಿ ಇಲ್ಲದ್ದಕ್ಕೆ ಹಲ್ಲೆಯ ಕತೆ ಕಟ್ಟಿದ್ದ ಎಂಬ ಸತ್ಯಾಂಶ ಹೊರಬಿದ್ದಿದೆ.

ಈ ಬಗ್ಗೆ ನಗರ ಪೊಲೀಸ್​ ಕಮಿಷನರ್​ ಎನ್​. ಶಶಿಕುಮಾರ್​ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಬಾಲಕನಿಗೆ ಹಲ್ಲೆಗೈಯ್ಯಲಾಗಿದೆ ಎಂಬ ಸುದ್ದಿ ಸುರತ್ಕಲ್​, ಕೃಷ್ಣಾಪುರ, ಚೊಕ್ಕಬೆಟ್ಟು ವ್ಯಾಪ್ತಿಯಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗಿದ್ದು, ಸನ್ನಿವೇಶ, ಸಾಕ್ಷಿ, ಸಿಸಿ ಕ್ಯಾಮರಾ ದಾಖಲೆಗಳನ್ನು ಪರಿಶೀಲಿಸಲಾಗಿದೆ. ಬಾಲಕನನ್ನು ವಿಚಾರಣೆ ನಡೆಸಿದಾಗ ಆತನಿಗೆ ವೈಯಕ್ತಿಕ ಸಮಸ್ಯೆಯಿದ್ದು, ಎಷ್ಟು ಓದಿದರೂ ಅರ್ಥವಾಗುತ್ತಿರಲಿಲ್ಲ. ಶಾಲೆಯಲ್ಲೂ ಸರಿಯಾದ ಸ್ನೇಹಿತರಿರಲಿಲ್ಲ, ಮನೆಯಲ್ಲಿ ಬಡತನ. ಈ ರೀತಿಯ ಗೊಂದಲದಿಂದ ಮಾನಸಿಕವಾಗಿ ನೊಂದ ಬಾಲಕ ತನ್ನದೇ ಪೆನ್​ನಿಂದ ಅಂಗಿಗೆ ತೂತು ಮಾಡಿ ಹಲ್ಲೆಗೈದಿರುವ ಬಗ್ಗೆ ವಿವಾದ ಸೃಷ್ಟಿಸಿದ್ದಾನೆ. ವಿಚಾರಣೆ ವೇಳೆ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎಂದು ಕಮಿಷನರ್​ ತಿಳಿಸಿದ್ದಾರೆ.

ಬಾಲಕನ ಹೇಳಿಕೆ ಬಳಿಕ ಮದರಸಾ ಮುಖಂಡರಿಗೆ ಮತ್ತು ಪಾಲಕರಿಗೆ ಸಮಾಧಾನವಾಗಿದೆ. ಕೆಲವರು ಈ ಘಟನೆಯನ್ನು ಕೋಮು ದ್ವೇಷ ಹಬ್ಬಿಸುವ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ ಎಂದು ಕಮಿಷನರ್​ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net