ಕೆ.ಎಚ್​.ಮುನಿಯಪ್ಪ ಜೆಡಿಎಸ್​ ಸೇರ್ಪಡೆ? ಎಚ್​ಡಿಕೆ ಜತೆ ನಡೆದಿದೆ ಒಂದು ಸುತ್ತಿನ ಮಾತುಕತೆ?

muniyappa hdk
Published on

ಬೆಂಗಳೂರು: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್​ ಧುರೀಣ ಕೆ.ಎಚ್​. ಮುನಿಯಪ್ಪ ಜೆಡಿಎಸ್​ ಸೇರುವ ಸಾಧ್ಯತೆಗಳಿವೆ. ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಸಾಗಿದ ಹಾದಿಯಲ್ಲೇ ಮುನಿಯಪ್ಪ ಕೂಡ ಹೆಜ್ಜೆ ಹಾಕಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ.

30 ವರ್ಷ ಸಂಸದರಾಗಿದ್ದ ಮುನಿಯಪ್ಪರನ್ನು ದೂರವಿಟ್ಟು ಮಾಜಿ ಶಾಸಕರಾದ ಚಿಂತಾಮಣಿಯ ಡಾ.ಎಂ.ಸಿ.ಸುಧಾಕರ್​, ಮುಳಬಾಗಿಲಿನ ಕೊತ್ತೂರು ಮಂಜುನಾಥ್​ ಅವರು ಕಾಂಗ್ರೆಸ್​ ಸೇರ್ಪಡೆಯಾಗಿದ್ದು ಮುನಿಯಪ್ಪಗೆ ಸಹಿಸಲಾಗುತ್ತಿಲ್ಲ. ಜಿಲ್ಲೆಯಲ್ಲಿ ಪಕ್ಷದ ಮೇಲಿನ ಹಿಡಿತ ಮುನಿಯಪ್ಪರ ಕೈಯಿಂದ ಜಾರುತ್ತಿದ್ದು, ಮಾಜಿ ಸ್ಪೀಕರ್​ ರಮೇಶ್​ಕುಮಾರ್​ ಬಣ ಸದೃಢವಾಗುತ್ತಿದೆ. ಕಳೆದ ಬಾರಿ ಎಸ್​.ಮುನಿಸ್ವಾಮಿ ಅವರನ್ನು ಬೆಂಬಲಿಸಿದ್ದ ಕೊತ್ತೂರು, ಸುಧಾಕರರೆಡ್ಡಿ ಪಕ್ಷ ಸೇರ್ಪಡೆ ವಿರುದ್ಧ ಸೆಟೆದು ನಿಂತಿರುವ ಮುನಿಯಪ್ಪ, "ರ್ನಿಲಕ್ಷ್ಯ''ವನ್ನು ತಿಂಗಳೊಳಗೆ ಸರಿಪಡಿಸಲು ಗಡುವು ವಿಧಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಕೆ.ಎಚ್​.ಮುನಿಯಪ್ಪ ಜೆಡಿಎಸ್​ಗೆ ಸೇರುತ್ತಾರೆ ಎಂಬ ಚರ್ಚೆಯೂ ಶುರುವಾಗಿದೆ.

ಮಾಜಿ ಸಚಿವ ರಮೇಶ್​ ಕುಮಾರ್​ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವ ಮುನಿಯಪ್ಪ, ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎಂದು ಜೆಡಿಎಸ್​ ಮೂಲಗಳು ತಿಳಿಸಿವೆ. ಆದರೆ ಮುನಿಯಪ್ಪ ಕಾಂಗ್ರೆಸ್​ ತೊರೆಯುವ ಬಗ್ಗೆ ಎಲ್ಲೂ ಬಹಿರಂಗಪಡಿಸಿಲ್ಲ.

ಅನೇಕ ವಿಚಾರಗಳಲ್ಲಿ ಕಾಂಗ್ರೆಸ್​ ರಾಜ್ಯ ನಾಯಕರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಮುನಿಯಪ್ಪ, ಕೋಲಾರದ ಕೆಲವು ಕಾಂಗ್ರೆಸ್​ ನಾಯಕರ ಬಗ್ಗೆ ಪದೇಪದೆ ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net