

ಮುಂಡಗೋಡ: ದೇವರಾಜ ಅರಸು ಎರಡು ಬಾರಿ ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಹಿಂದುಳಿದ ವರ್ಗಗಳ ಏಳಿಗೆಗಾಗಿ ಹೆಚ್ಚಿನ ಒತ್ತು ನೀಡಿದ್ದರು ಎಂದು ಜಿಪಂ ಮಾಜಿ ಸದಸ್ಯ ಎಲ್.ಟಿ. ಪಾಟೀಲ ಹೇಳಿದರು.
ತಾಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಪಟ್ಟಣದ ಮರಾಠ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಡಿ. ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಹಸೀಲ್ದಾರ್ ಶಂಕರ ಗೌಡಿ ಮಾತನಾಡಿ, 50 ವರ್ಷಗಳ ಹಿಂದೆ ರಾಜ್ಯವನ್ನಾಳಿದ ಡಿ. ದೇವರಾಜ ಅರಸ ಅವರು ಮಾಡಿರುವ ಕ್ರಾಂತಿಕಾರಿ ಕೆಲಸಗಳಿಂದ ಇಂದಿಗೂ ಅವರನ್ನು ಸ್ಮರಿಸಲಾಗುತ್ತಿದೆ. ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಮೂಲಕ ಕ್ರಾಂತಿಕಾರಿ ಬದಲಾವಣೆ ತಂದರು. ಹಿಂದುಳಿದ ವರ್ಗಗಳ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಕಾರ್ಯಕ್ರಮ ರೂಪಿಸಿದ್ದರು ಎಂದರು.
ಶಿಕ್ಷಕ ರವಿ ಅಕ್ಕಿವಳ್ಳಿ ಉಪನ್ಯಾಸ ನೀಡಿದರು. ಪಟ್ಟಣ ಪಂಚಾಯಿತಿ ಸದಸ್ಯ ಅಶೋಕ ಚಲವಾದಿ, ತುಕಾರಾಮ ಗುಡಕರ್ ಮಾತನಾಡಿದರು. ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಸುಜಾತಾ ಹಂಜಿ, ಅರುಣ ಗೊಂದಳೆ, ಡಿ.ಎಫ್. ಮಡ್ಲಿ, ಲೋಕೋಪಯೋಗಿ ಎಇಇ ಮಹದೇವಪ್ಪ ಹ್ಯಾಟಿ, ಪ್ರಕಾಶ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಿ. ಚಂದ್ರಶೇಖರ, ಇತರರಿದ್ದರು.