

ಹಾನಗಲ್ಲ: ಭೂ ಸುಧಾರಣಾ ಕಾಯ್ದೆ, ಉಳುವವನೇ ಭೂಮಿಯ ಒಡೆಯ ಎಂಬಂತಹ ಹತ್ತಾರು ಕ್ರಾಂತಿಕಾರಿ ನಿಲುವಿನಿಂದ ಹೊಸ ಮನ್ವಂತರಕ್ಕೆ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪ್ರಾಥಃಸ್ಮರಣೀಯರಾದರು ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಭಾನುವಾರ ಆಯೋಜಿಸಿದ್ದ ಸಾಮಾಜಿಕ ಪರಿವರ್ತನೆಯ ಹರಿಕಾರ ಡಿ.ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ನಡೆಯುತ್ತಿದ್ದ ಅನಿಷ್ಟ ಪದ್ಧತಿಗಳು, ವರ್ಣಬೇಧಗಳನ್ನು ತೊಡೆದು ಹಾಕಲು ಶ್ರಮಿಸಿದ್ದರು. ಹಿಂದುಳಿದ ವರ್ಗಗಳ ಧ್ವನಿಯಾಗಿ ಕರ್ನಾಟಕದಲ್ಲಿ ದೇವರಾಜ ಅರಸು ತಮ್ಮ ವಿಶಿಷ್ಟ ಛಾಪು ಮೂಡಿಸಿದ್ದರು. ಶೈಕ್ಷಣಿಕ ಸಾಲ ಯೋಜನೆ, ವಸತಿ ನಿಲಯಗಳ ಆರಂಭ, ಗಂಗಾಕಲ್ಯಾಣ ಯೋಜನೆಯ ಮೂಲಕ ವಿವಿಧ ಸಮುದಾಯಗಳನ್ನು ಆರ್ಥಿಕವಾಗಿ ಮುಖ್ಯವಾಹಿನಿಗೆ ತರುವಲ್ಲಿ ಅವರ ಚಿಂತನೆಗಳು ಪ್ರಭಾವಶಾಲಿಯಾಗಿದ್ದವು ಎಂದರು.
ಹಾವೇರಿಯ ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ ಉಪನ್ಯಾಸ ನೀಡಿ, ಡಿ.ದೇವರಾಜ ಅರಸು ಸಾಮಾಜಿಕ ನ್ಯಾಯಕ್ಕೆ ಹೊಸ ಭಾಷ್ಯ ಬರೆದವರು. ಅವರ ಅಧಿಕಾರಾವಧಿಯನ್ನು ಹಿಂದುಳಿದ ವರ್ಗಗಳವರ ಸುವರ್ಣಯುಗ ಎಂದು ಬಣ್ಣಿಸಲಾಗುತ್ತದೆ. ಅರಸು ಅವರ ಜನಪರ ಕಾಳಜಿ, ದೂರದೃಷ್ಟಿತ್ವ ತಲೆ ತಲಾಂತರದಿಂದ ಶೋಷಣೆಗೊಳಗಾದವರ ಬಂಧಮುಕ್ತಿಗೆ ದಾರಿಯಾಯಿತು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಆನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ತಹಸೀಲ್ದಾರ್ ರವಿಕುಮಾರ ಕೊರವರ, ತಾಪಂ ಸಹಾಯಕ ನಿರ್ದೇಶಕ ಚನ್ನಬಸಪ್ಪ ಹಾವಣಗಿ, ತಾಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ಕೆಎಂಎಫ್ ನಿರ್ದೇಶಕ ಚಂದ್ರಪ್ಪ ಜಾಲಗಾರ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಡಿಎಸ್‌ಎಸ್ ಮುಖಂಡ ಹನುಮಂತಪ್ಪ ಯಳ್ಳೂರ, ರೈತಸಂಘದ ಅಧ್ಯಕ್ಷ ಮರಿಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಗಂಗಾಮತ ಸಮಾಜದ ಅಧ್ಯಕ್ಷ ಕರಿಯಪ್ಪ ಆನವಟ್ಟಿ ಇದ್ದರು. ಸಂಗೀತ ಶಿಕ್ಷಕ ಜಗದೀಶ ಮಡಿವಾಳರ ಪ್ರಾರ್ಥಿಸಿದರು. ಬಿ.ಆರ್. ಪಾಟೀಲ ನಿರೂಪಿಸಿದರು. ಡಿ.ಎಸ್.ಪಾಟೀಲ ವಂದಿಸಿದರು.