

ತಿ.ನರಸೀಪುರ : ಕೃಷಿಕರು, ಬಡವರು, ಕೂಲಿ ಕಾರ್ಮಿಕರು ನೆಲೆ ನೀಡಿದ ಡಿ.ದೇವರಾಜ ಅರಸು ಅವರು ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿಸ್ತರಿಸಿ, ಭೂಸುಧಾರಣೆ ಕಾಯ್ದೆ, ಜೀತಮುಕ್ತಿ ಪದ್ಧತಿ, ಕೃಷಿ, ಹೈನುಗಾರಿಕೆಯಲ್ಲಿ ಅನೇಕ ಸುಧಾರಣೆಗಳನ್ನು ಆಡಳಿತದಲ್ಲಿ ಜಾರಿಗೆ ತಂದಂತಹ ಸಾಮಾಜಿಕ ಅಭಿವೃದ್ಧಿಯ ಹರಿಕಾರ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಕೆ.ಬಿ.ಪ್ರಭುಸ್ವಾಮಿ ಬಣ್ಣಿಸಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅರಸು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಅರಸು ಆಡಳಿತದಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದವರು. ಸಾಮಾಜಿಕ ಬದಲಾವಣೆ, ಬಡತನ ನಿರ್ಮೂಲನೆ, ಮನೆಗಳ ನಿರ್ಮಾಣದಲ್ಲಿ ಅದ್ವಿತೀಯ ಕೆಲಸ ಮಾಡಿದ್ದಾರೆ. ಹಿಂದುಳಿದ ವರ್ಗದವರ ಅಭಿವೃದ್ಧಿಗೆ ಅಂದೇ ಬುನಾದಿ ಹಾಕಿದ ಕೀರ್ತಿ ಅರಸು ಅವರದು. 70 ರಿಂದ 80ರ ದಶಕದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾದ ನ್ಯಾಯ ಪ್ರತೀಕನೆಂಬ ಖ್ಯಾತಿಗೂ ಪಾತ್ರರಾಗಿದ್ದರು ಎಂದು ನೆನಪಿಸಿಕೊಂಡರು.
ಡಿ. ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ, ಉಳುವವನೇ ಭೂಮಿಯ ಒಡೆಯನೆಂದು ಪರಿವರ್ತಿಸಿದರು. ಭೂಮಿ ಇಲ್ಲದವರಿಗೆ ಉಳುಮೆಗಾಗಿ ಕೃಷಿ ಭೂಮಿ ದೊರೆಯಿತು. ಇದರಿಂದ ಭೂಮಿ ಇಲ್ಲದವರಿಗೆ, ಬಡವರಿಗೆ ನ್ಯಾಯ ದೊರಕಿತು. ನಿವೇಶನ ರಹಿತರಿಗೆ ನಿವೇಶನಗಳು ಮಂಜೂರಾದವು. ಈ ಹಿಂದೆ ಹಲವು ನಾಯಕರು ರಾಜ್ಯದಲ್ಲಿ ಆಡಳಿತ ನಡೆಸಿ ಹೋಗಿದ್ದಾರೆ. ಆದರೆ ದೇವರಾಜ ಅರಸು ಅವರು 1969ರಿಂದ 1979ರವರೆಗೆ ನಡೆಸಿದ ಆಡಳಿತ ಅರಸು ಯುಗವಾಗಿತ್ತು. ಹೆಣ್ಣುಮಕ್ಕಳ ಶಿಕ್ಷಣಕ್ಕೆ ವಸತಿ ನಿಲಯಗಳನ್ನು ಸ್ಥಾಪಿಸಿದರು. 1973 ನವೆಂಬರ್ 1ರಂದು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವೆಂದು ಮರುನಾಮಕರಣ ಮಾಡಿದರು. ಆಡಳಿತದಲ್ಲಿ ಸಾರ್ವಜನಿಕರ ತೊಂದರೆಗಳನ್ನು ನಿವಾರಿಸುವಲ್ಲಿ ಅರಸು ಅವರ ಪಾತ್ರ ಬಹು ದೊಡ್ಡದು ಎಂದು ಕೆ.ಬಿ.ಪ್ರಭುಸ್ವಾಮಿ ತಿಳಿಸಿದರು.
ಮುಖ್ಯ ಭಾಷಣಕಾರ ಶರಣಪ್ಪ ಎಂ.ಮೊಗಲೆ ಮಾತನಾಡಿ, ದೇವರಾಜ ಅರಸು ಅವರು ಅನೇಕ ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದರು.
ಮಲ ಹೊರುವ ಪದ್ಧತಿ, ಜೀತ ಪದ್ಧತಿಗಳಂತಹ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆ ಮಾಡುವಲ್ಲಿ ದೇವರಾಜ ಅರಸು ಅವರ ಪಾತ್ರ ಅಪಾರವಾಗಿದೆ. ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಮೂಲಕ ದೇವರಾಜ ಅರಸು ಅವರು ರಾಷ್ಟ್ರಕ್ಕೆ ಮಾದರಿಯಾಗಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯಕ್ಕೆ ಸಂಬಂಧಿಸಿದ ಅನೇಕ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಿದರು. ಅವರ ಅವಧಿಯಲ್ಲಿ ಜಾರಿಗೆ ತಂದ ಗೇಣಿದಾರಿಕೆ ಕಾಯ್ದೆ ಮತ್ತು ಹಾವನೂರು ಆಯೋಗದಂತಹ ಕ್ರಮಗಳು ರೈತರು ಮತ್ತು ಹಿಂದುಳಿದ ವರ್ಗದವರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತಂದವು. ಭೂಸುಧಾರಣೆ, ಉಳುವವನಿಗೆ ಭೂಮಿ ಎಂಬ ಕ್ರಾಂತಿಕಾರಿ ಆಲೋಚನೆಯನ್ನು ಜಾರಿಗೊಳಿಸಿದರು. ಇದರಿಂದಾಗಿ ಭೂಹೀನರಿಗೆ ಭೂಮಿ ಸಿಕ್ಕಿತು ಮತ್ತು ರೈತರ ಜೀವನ ಮಟ್ಟ ಸುಧಾರಿಸಿತು. ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದರು. ಹಾವನೂರು ಆಯೋಗದ ರಚನೆ ಅವರ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದರು ಮತ್ತು ಎಲ್ಲ ವರ್ಗದವರಿಗೂ ಸಮಾನ ಅವಕಾಶಗಳನ್ನು ಒದಗಿಸಲು ಶ್ರಮಿಸಿದರು. ಅವರನ್ನು ಕರ್ನಾಟಕದ ಇತಿಹಾಸದಲ್ಲಿ ಒಬ್ಬ ಮಹಾನ್ ನಾಯಕ ಎಂದು ಪರಿಗಣಿಸಲಾಗುತ್ತದೆ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಹಾಗೂ ಕ್ರೀಡೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಪುರಸಭೆ ಅಧ್ಯಕ್ಷೆ ಬಿ.ವಸಂತ ಶ್ರೀಕಂಠ, ಸದಸ್ಯರಾದ ಗುರುಸ್ವಾಮಿ, ನಾಗರಾಜು, ಸಬೀಲ್ ಖಾನ್, ಸಿಸ್ಟಮ್ ಸಿದ್ದು, ಕಾರ್ಯನಿರ್ವಹಣಾಧಿಕಾರಿ ಪಿ.ಎಸ್.ಅನಂತರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಶಿರಸ್ತೇದಾರ್ ಮಂಜುಳಾ , ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್. ಪ್ರಭುಸ್ವಾಮಿ, ಸಾಮಾಜಿಕ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಎಂ.ರಮೇಶ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಮಹದೇವಮ್ಮ, ಸಿ.ಪುಟ್ಟಮಲ್ಲಯ್ಯ, ಹಿಂದುಳಿದ ವರ್ಗಗಳ ಅಧಿಕಾರಿ ಎಂ.ರಾಜಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ, ಬಿ ಆರ್ ಸಿ ನಾಗೇಶ್, ಉಪನ್ಯಾಸಕ ಕುಮಾರಸ್ವಾಮಿ, ಕೆಪಿಸಿಸಿ ಅಲ್ಪಸಂಖ್ಯಾತರ ಕಾರ್ಯದರ್ಶಿ ಡಾ.ಬಿ.ಮನ್ಸೂರ್ ಆಲಿ, ಮುಖಂಡರಾದ ತ್ರಿವೇಣಿನಗರ ಮಹದೇವಮ್ಮ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.