ಶಿಕ್ಷಣ ನೀಡಿ ಹಸಿವು ನೀಗಿಸಿದ ಸಹೃದಯಿ

20 HANUR 2
Published on

ಚಾಮರಾಜನಗರ: ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರ ಜತೆಗೆ ಅನ್ನ ದಾಸೋಹ ಕಲ್ಪಿಸಿದ ಸಹೃದಯಿಗಳು ಎಂದು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಂಯೋಜನಾಧಿಕಾರಿ ತ್ರಿಪುರಾಂತರ ತಿಳಿಸಿದರು.


ಹನೂರು ತಾಲೂಕಿನ ರಾಮಾಪುರದ ಸಭಾ ಭವನದಲ್ಲಿ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 109ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಶ್ರೀಗಳು ಕನ್ನಡ ಮತ್ತು ಸಂಸ್ಕೃತದಲ್ಲಿ ವಿದ್ವಾಂಸರಾಗಿದ್ದು, ಕಲೆ ಮತ್ತು ಸಾಹಿತ್ಯದ ಪೋಷಕರಾಗಿದ್ದರು. ಚಿಂತನೆ ಹಾಗೂ ಸಂವೇದನಾ ಶೀಲತೆಯುಳ್ಳವರಾಗಿದ್ದರು. ಅವರು ಒಳ್ಳೆಯ ಆಲೋಚನೆಯನ್ನು ವಾಸ್ತವಕ್ಕೆ ತಿರುಗಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ನಿರ್ಗತಿಕ ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸುವ ಸಲುವಾಗಿ ಹಾಸ್ಟೆಲ್ ಆರಂಭಿಸಿದರು. ಬಳಿ ಶಾಲೆ, ಕಾಲೇಜುಗಳನ್ನು ಸ್ಥಾಪಿಸಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು. ಧಾರ್ಮಿಕ ಚಟುವಟಿಕೆಗಳಿಗೆ ಸೀಮಿತವಾಗದೆ ಸಮಾಜದಲ್ಲಿನ ಅಸಮಾನತೆ, ಬಡತನವನ್ನು ಹೋಗಲಾಡಿಸುವಲ್ಲಿ ಇವರ ಶ್ರಮ ಅಪಾರ. ಈ ಮೂಲಕ ಶ್ರೀ ಮಠದ ಸೇವೆಯನ್ನು ವಿಸ್ತರಿಸುವುದರ ಮೂಲಕ ಯಾವುದೇ ಸ್ವಾರ್ಥವಿಲ್ಲದೇ ಸಮಾಜಕ್ಕೆ ದಣಿವರಿಯದೆ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಬಣ್ಣಿಸಿದರು.


ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಸಿದ್ದಮಲ್ಲಪ್ಪ ಮಾತನಾಡಿ, ಶ್ರೀಗಳು ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಜತೆಗೆ ಆಸ್ಪತ್ರೆಗಳನ್ನು ಸ್ಥಾಪಿಸಿ ಆರೋಗ್ಯಕ್ಕೂ ಹೆಚ್ಚಿನ ಒತ್ತು ನೀಡಿದ್ದರು. ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವುದರ ಮೂಲಕ ಸಮಾಜಕ್ಕೆ ಉತ್ತಮ ಸೇವೆ ನೀಡಿದ್ದಾರೆ ಎಂದು ತಿಳಿಸಿದರು.


ಇದಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರೊಂದಿಗೆ ಶ್ರೀಗಳ ಭಾವಚಿತ್ರವನ್ನು ಮೆರವಣಿಗೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಬಸವಣ್ಣ ಸ್ವಾಮೀಜಿ, ಸೋಮಶೇಖರ ಸ್ವಾಮೀಜಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net