ಯುವಕನ ಕೊಲೆ: ಯುವತಿಯ ತಂದೆ-ತಾಯಿ ಸೇರಿ 10 ಮಂದಿ ಅರೆಸ್ಟ್

murder case
Published on

ಬೆಳಗಾವಿ: ಖಾನಾಪುರದ ಹೊರವಲಯದ ರೈಲ್ವೆ ಹಳಿ ಮೇಲೆ ಸೆ.28ರಂದು ಪತ್ತೆಯಾಗಿದ್ದ ಯುವಕನ ಶವ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಮೃತನ ಪ್ರೇಯಸಿಯ ತಂದೆ-ತಾಯಿ ಸೇರಿ 10 ಮಂದಿಯನ್ನ ಬಂಧಿಸಿದ್ದಾರೆ.

ಖಾನಾಪುರದ ಯುವಕ ಅರ್ಬಾಜ್​ ಮುಲ್ಲಾ(24) ಮೃತ ದುರ್ದೈವಿ. ಈತ ಅನ್ಯಕೋಮಿನ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದ. ಈ ವಿಚಾರ ತಿಳಿದ ಯುವತಿ ತಂದೆ ಈರಪ್ಪ ಕುಂಬಾರ ಮತ್ತು ತಾಯಿ ಸುಶೀಲಾ ಕುಂಬಾರ ಇಬ್ಬರೂ ಮಗಳ ಪ್ರಿಯಕರನ ಕೊಲೆಗೆ ಸಂಚು ರೂಪಿಸಿದ್ದರು. ಅದರಂತೆ ಪುಂಡಲೀಕನಿಗೆ ಕೊಲೆ ಮಾಡುವಂತೆ ಸೂಚಿಸಿದ್ದರು. ಅದರಂತೆ ಪುಂಡಲಿಕ ಅಲಿಯಾಸ್​ ಮಹಾರಾಜ್ ಮುತಗೇಕರ್ ಎಂಬಾತನಿಗೆ ಸುಪಾರಿ ಕೊಟ್ಟಿದ್ದರು.

ಸೆ.28ರಂದು ಅರ್ಬಾಜ್​ನನ್ನು ಕರೆಸಿಕೊಂಡ ಪುಂಡಲೀಕನ ತಂಡ ಕೊಲೆ ಮಾಡಿ ಅನುಮಾನ ಬಾರದಂತೆ ರೈಲ್ವೆ ಹಳಿ ಮೇಲೆ ಶವ ಎಸೆದು ಹೋಗಿದ್ದರು. ಮಗನನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಮೃತನ ತಾಯಿ ನಾಜಿಮಾ ಶೇಕ್ ಸೆ.29ರಂದು ರೈಲ್ವೆ ಪೊಲೀಸ್​ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಈ ಕೇಸ್​ ಅ.3ರಂದು ಜಿಲ್ಲಾ ಪೊಲೀಸರಿಗೆ ವರ್ಗಾವಣೆಯಾಗಿತ್ತು. ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಬೈಲಹೊಂಗಲ ಡಿವೈಎಸ್​ಪಿ ಶಿವಾನಂದ ಕಟಗಿ ನೇತೃತ್ವದ ತಂಡ ತನಿಖೆ ನಡೆಸಿದ್ದು, ಅನ್ಯಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕೆ ಅರ್ಬಾಜ್​ನನ್ನು ಪ್ರೇಯಸಿ ಕುಟುಂಬಸ್ಥರೇ ಸೇರಿಕೊಂಡು ಕೊಲೆ ಮಾಡಿಸಿರುವುದು ಗೊತ್ತಾಗಿದೆ.

ಆರೋಪಿಗಳಾದ ಈರಪ್ಪ ಕುಂಬಾರ, ಸುಶೀಲಾ ಕುಂಬಾರ, ಪುಂಡಲೀಕ, ಕುತುಬುದ್ದಿನ್ ಬೇಪಾರಿ, ಮಾರುತಿ ಸುಗತೆ, ಮಂಜುನಾಥ ಗೊಂಧಳಿ, ಗಣಪತಿ ಸುಗತೆ, ಪ್ರಶಾಂತ ಪಾಟೀಲ್, ಪ್ರವೀಣ್ ಪೂಜೇರಿ, ಶ್ರೀಧರ್ ಡೋಣಿ ಎಂಬುವರನ್ನು ಪೊಲೀಸರು ಶುಕ್ರವಾರ(ಅ.8) ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net