ಬಡ್ಡಿ ದಂಧೆ ನಡೆಸುವವರಿಗೆ ಖಾಕಿ ಶಾಕ್

imgres
Published on

ಶಿವಮೊಗ್ಗ: ಅಕ್ರಮವಾಗಿ ಬಡ್ಡಿ ದಂಧೆ ನಡೆಸುತ್ತಿದ್ದವರ ಮೇಲೆ ಕಾರ್ಯಾಚರಣೆ ಮುಂದುವರಿಸಿರುವ ಜಿಲ್ಲಾ ಪೊಲೀಸರು ಸತತ ಎರಡನೇ ದಿನವೂ ಬಡ್ಡಿ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯ ಮನೆ ಮೇಲೆ ದಾಳಿ ನಡೆಸಿ ನಗದು, ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.

ವೆಂಕಟೇಶನಗರದ ವೆಂಕಟೇಶ್ ಎಂಬುವರ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು 29,750 ರೂ. ನಗದು, 13 ಖಾಲಿ ಚೆಕ್‌ಗಳು, 55 ಸಾವಿರ ರೂ. ಎಂದು ನಮೂದಾಗಿರುವ ಒಂದು ಚೆಕ್, ಸಹಿ ಇರುವ ಖಾಲಿ ಸ್ಟಾಂಪ್ ಪೇಪರ್, ನಿವೇಶನ ದಾಖಲಾತಿ, ಬಡ್ಡಿ ವ್ಯವಹಾರ ನಮೂದಾಗಿರುವ ಏಳು ನೋಟ್ ಪುಸ್ತಕಗಳನ್ನು ವಶಕ್ಕೆ ಪಡೆದಿದ್ದಾರೆ.
ಮಹಿಳೆಯೊಬ್ಬರಿಗೆ ವೆಂಕಟೇಶ್ 5 ಪರ್ಸೆಂಟ್ ಬಡ್ಡಿಗೆ ಸಾಲ ನೀಡಿದ್ದರು. ಇದಕ್ಕಾಗಿ ಮನೆಯ ದಾಖಲೆ ಪತ್ರ, ಖಾಲಿ ಚೆಕ್ ಪಡೆದಿದ್ದರು. ಸಕಾಲದಲ್ಲಿ ಬಡ್ಡಿ ಮತ್ತು ಅಸಲು ತೀರಿಸದ ಕಾರಣ ಖಾಲಿ ಚೆಕ್‌ಗಳ ಆಧಾರದ ಮೇಲೆ ಕೇಸ್ ದಾಖಲಿಸುವುದಾಗಿ ಬೆದರಿಕೆ ಒಡ್ಡಿದ್ದರು. ಈ ಸಂಬಂಧ ವೆಂಕಟೇಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮಹಿಳೆ ಜಯನಗರ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಶಿವಮೊಗ್ಗದಲ್ಲಿ ಬಡ್ಡಿ ದಂಧೆ ನಡೆಸುತ್ತಿರುವವರ ವಿರುದ್ಧ ಸಾರ್ವಜನಿಕರು ದೂರು ನೀಡಬಹುದು. 112ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net