ವಂಚಕರ ಹೆಡೆಮುರಿ ಕಟ್ಟಿದ ಖಾಕಿ ಪಡೆ

FRAUD CASHE
ವಿಜಯಪುರದ ಎಸ್‌ಪಿ ಎಚ್.ಡಿ. ಆನಂದಕುಮಾರ ಸುದ್ದಿಗೋಷ್ಠಿಯಲ್ಲಿ ನಕಲಿ ದಾಖಲೆ ಪ್ರದರ್ಶಿಸಿದರು. ಎಎಸ್‌ಪಿ ಶಂಕರ ಮಾರಿಹಾಳ, ವಿಜಯ ಮಠಪತಿ ಇದ್ದಾರೆ.
Published on

ವಿಜಯಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಒನ್ ನೇಷನ್ ಒನ್ ಕಾರ್ಡ್’ ಯೋಜನೆಯಡಿ ವಿದ್ಯಾವಂತ ಯುವಕ-ಯುವತಿಯರಿಗೆ ಗುತ್ತಿಗೆ ಆಧಾರದ ಮೇಲೆ ನೌಕರಿ ಕೊಡಿಸುವುದಾಗಿ ನಂಬಿಸಿ 95 ಲಕ್ಷಕ್ಕೂ ಅಧಿಕ ಹಣ ಪಂಗನಾಮ ಹಾಕಿರುವ ವಂಚಕರನ್ನು ಪೊಲೀಸರು ಹೆಡೆಮುರಿ ಕಟ್ಟಿ ತಂದಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ನಿವಾಸಿ ಎಸ್.ಸುಧೀರ ಬಾಬು ಅಲಿಯಾಸ್ ಸುಧೀರ ರೆಡ್ಡಿ ಹಾಗೂ ಶಶಾಂಕ ಎಸ್.ಎನ್ ಬಂಧಿತ ಆರೋಪಿಯಾಗಿದ್ದು, ಇವರೊಂದಿಗೆ ಇನ್ನೂ 8-10 ಜನರಿದ್ದು ಅವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಬಂಧಿತ ಸುಧೀರ ರೆಡ್ಡಿಯನ್ನು ತನಿಖೆಗೊಳಪಡಿಸಿದ್ದು ವಂಚನೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇಂಥ ಇನ್ನಷ್ಟು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆಯೇ? ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವುದಾಗಿ ಎಸ್‌ಪಿ ಎಚ್.ಡಿ. ಆನಂದಕುಮಾರ ಬುಧವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಪ್ರಕರಣದ ಹಿನ್ನೆಲೆ

ತಿಕೋಟಾ ತಾಲೂಕಿನ ತೊರವಿ ಗ್ರಾಮದ ಸ್ಪೂರ್ತಿ ವುಮೆನ್ಸ್ ರೂರಲ್ ಡೆವಲಪ್‌ಮೆಂಟ್ ಸರ್ವೀಸ್ ಅಸೋಸಿಯೇಷನ್ ಸಂಸ್ಥೆಯ ಮುಖ್ಯಸ್ಥೆ ಶಶಿಕಲಾ ಗುರುಪಾದಯ್ಯ ತಳಸದಾರ ಇವರನ್ನು ಸಂಪರ್ಕಿಸಿದ ಸುಧೀರ ರೆಡ್ಡಿ, ತಾವು ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ಕಾರ್ಡ್ ಯೋಜನೆಯಡಿ ರಾಜ್ಯಕ್ಕೆ ಅನ್ವಯವಾಗುವಂತೆ ಗುತ್ತಿಗೆ ಪಡೆದಿದ್ದಾಗಿ ತಿಳಿಸಿದ್ದಾರೆ. ಆ ಕೆಲಸಕ್ಕೆ ಸಾಕಷ್ಟು ವಿದ್ಯಾವಂತ ಯುವಕ ಮತ್ತು ಯುವತಿಯರ ಅವಶ್ಯಕತೆ ಇದೆ. ಅವರನ್ನು ತರಬೇತುಗೊಳಿಸಿ ಗುತ್ತಿಗೆ ಆಧಾರದ ಮೇಲೆ ನೌಕರಿ ನೀಡುವುದಾಗಿ ನಂಬಿಸಿದ್ದಾರೆ.

ಪ್ರತಿ ತಾಲೂಕಿಗೆ ಒಬ್ಬರು ಸಂಯೋಜಕರು, 25 ಜನ ಕಾರ್ಡ್ ಎನ್‌ರಾಲ್‌ಮೆಂಟ್ ಮಾಡುವವರು ಹಾಗೂ 7 ಜನ ಕಾರ್ಡ್ ಪ್ರಿಂಟ್ ಮಾಡುವವರು ಬೇಕಾಗುತ್ತಾರೆ. ಸಂಯೋಜಕರಿಂದ ಭದ್ರತಾ ಠೇವಣಿ 10 ಸಾವಿರ ರೂ.ಪಡೆದು ಅವರ ಮೂಲಕ 32 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡು ಅವರಿಂದ ಪರೀಕ್ಷಾ ಶುಲ್ಕ ತಲಾ 1299 ರೂ.ಗಳಂತೆ ಸಂಗ್ರಹ ಮಾಡಿ ಕಳುಹಿಸಿದರೆ ಅವರಿಗೆ ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಿ ತೇರ್ಗಡೆಯಾದವರಿಗೆ ಪ್ರತಿ ಗ್ರಾಮ ಪಂಚಾಯಿತಿಗೆ ಒಬ್ಬರಂತೆ ನೇಮಕ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ, ನಕಲಿ ದಾಖಲೆ ಸೃಷ್ಠಿಸಿ ನಂಬಿಕೆ ಬರುವಂತೆ ಮಾಡಿದ್ದಾರೆ. ಅಲ್ಲದೇ, ಶಶಿಕಲಾ ಮೂಲಕ ಒಟ್ಟು 95,75,548 ರೂ. ಆನ್‌ಲೈನ್ ಮೂಲಕ ಪಡೆದು ವಂಚನೆ ಮಾಡಿದ್ದಾರೆ.

ಚುರುಕಿನ ಕಾರ್ಯಾಚರಣೆ

ಪ್ರಕರಣಕ್ಕೆ ಸಂಬಂಧಿಸಿದಂತೆ ಶಶಿಕಲಾ ಸಿಇಎನ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ ಅವಜಿ ನೇತೃತ್ವ ತಂಡ ರಚಿಸಲಾಗಿತ್ತು. ಚುರುಕಿನ ಕಾರ್ಯಾಚರಣೆ ನಡೆಸಿದ ತಂಡ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲವಾಗಿದ್ದು, ಸೂಕ್ತ ಬಹುಮಾನ ನೀಡುವುದಾಗಿ ಎಸ್‌ಪಿ ಎಚ್.ಡಿ. ಆನಂದಕುಮಾರ ಹೆಮ್ಮೆ ವ್ಯಕ್ತಪಡಿಸಿದರು.

ತಂಡದಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ತಳವಾರ, ಪಿ.ವೈ. ಅಂಬಿಗೇರ, ಸಿಬ್ಬಂದಿಯಾದ ಎ.ಎಲ್. ದೊಡ್ಡಮನಿ, ಆರ್.ವಿ. ನಾಯಕ್, ಸಿದ್ದು ದಾನಪ್ಪಗೋಳ, ಎಂ.ಎಂ. ಕುರುವಿನಶೆಟ್ಟಿ, ಆರ್.ಬಿ. ಕೋಳಿ, ಡಿ.ಎಸ್. ಗಾಯಕವಾಡ, ಎಂ.ಬಿ. ಪಾಟೀಲ, ಡಿ.ಆರ್. ಪಾಟೀಲ, ಕುಮಾರ ರಾಠೋಡ, ಎಸ್.ಆರ್. ಬಡಚಿ, ಎಂ.ಎಚ್. ಇಂಚ್ಚೂರ, ಎಸ್.ಐ. ಹೆಬ್ಬಾಳಟ್ಟಿ, ಎ.ಎಚ್. ಪಾಟೀಲ ಹಾಗೂ ಪಿ.ಎಂ. ಪಾಟೀಲ ಇದ್ದು, ಪ್ರಮಾಣ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net