ವಿದೇಶದಿಂದ ಮಂಗಳೂರಿಗೆ ಆಗಮಿಸಿದ ಕೇರಳ ಯುವಕನಿಗೆ ಮಂಕಿಪಾಕ್ಸ್ ದೃಢ: ಐಸೋಲೇಶನಲ್ಲಿ 35 ಮಂದಿ

monkey
Published on

ಮಂಗಳೂರು: ಕೇರಳದಲ್ಲಿ ಎರಡನೇ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿದೆ. ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಕೇರಳಕ್ಕೆ ತೆರಳಿರುವ ಯುವಕನಿಗೆ ಸೋಂಕು ಖಚಿತವಾಗಿದ್ದು, ಮಂಗಳೂರಿನಲ್ಲೂ ಎಚ್ಚರಿಕೆ ವಹಿಸಲಾಗಿದೆ. 35 ಮಂದಿ ಐಸೋಲೇಶನ್​ಗೆ ಒಳಗಾಗಿದ್ದು, ರಾಜ್ಯದಲ್ಲಿ ಆತಂಕ ಹೆಚ್ಚಿದೆ.

ದುಬೈನಿಂದ ಜುಲೈ 13ರಂದು ವಿಮಾನದಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ 31 ವರ್ಷದ ಯುವಕನಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜಿಗೆ ತಪಾಸಣೆಗೆಂದು ಯುವಕ ತೆರಳಿದ್ದ. ಆಗ ಮಂಕಿಪಾಕ್ಸ್​ ಇರುವುದು ಗೊತ್ತಾಗಿದೆ. ವಿಶೇಷ ವಾರ್ಡಿನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯುವಕನ ಮಾದರಿಯನ್ನು ಪುಣೆ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿದ್ದು, ಪಾಸಿಟಿವ್ ಬಂದಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.

35 ಮಂದಿ ಐಸೋಲೇಶನ್: ಯುವಕನೊಂದಿಗೆ ನೇರ ಸಂಪರ್ಕ ಹೊಂದಿದ್ದ 35 ಮಂದಿ ಸೆಲ್ಫ್ ಐಸೋಲೇಶನ್‌ಗೆ ಒಳಗಾಗಿದ್ದಾರೆ. ಇದರಲ್ಲಿ ಯುವಕ ಪ್ರಯಾಣಿಸಿದ ವಿಮಾನದ ಕೆಲವು ಪ್ರಯಾಣಿಕರು, ವಿಮಾನ ನಿಲ್ದಾಣದ ಅಧಿಕಾರಿಗಳು ಸೇರಿದ್ದಾರೆ.

ದುಬೈಯಿಂದ ಆಗಮಿಸಿದ ವಿಮಾನದಲ್ಲಿ ಒಟ್ಟು 191 ಪ್ರಯಾಣಿಕರಿದ್ದರು. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ 15, ಉಡುಪಿ ಜಿಲ್ಲೆಯ 6, ಕಾಸರಗೋಡು ಜಿಲ್ಲೆಯ 13, ಕಣ್ಣೂರಿನ 1 ಹಾಗೂ ಮಂಗಳೂರು ವಿಮಾನ ನಿಲ್ದಾಣದ ಇಮ್ಮಿಗ್ರೇಶನ್ ಅಧಿಕಾರಿಯನ್ನು ಪ್ರತ್ಯೇಕವಾಗಿ ಇರುವಂತೆ ಸೂಚನೆ ನೀಡಲಾಗಿದೆ. ರೋಗ ಲಕ್ಷಣಗಳು ಕಂಡುಬಂದಲ್ಲಿ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಲು ಸೂಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ.ಅಶೋಕ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net