

ಮೈಸೂರು: ಮಹಾಮಾರಿ ಕರೊನಾ ಸೋಂಕಿಗೆ ಬಲಿಯಾದ ಅಣ್ಣನಿಂದ ತೆರವಾದ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ತಮ್ಮನನ್ನು ಅವಿರೋಧ ಆಯ್ಕೆ ಮಾಡಲಾಗಿದೆ.
ಇಂತಹ ಭಾವನಾತ್ಮಕ ಪ್ರಸಂಗ ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. 2020ರ ಡಿಸೆಂಬರ್ನಲ್ಲಿ ನಡೆದಿದ್ದ ಗ್ರಾಪಂ ಚುನಾವಣೆಯಲ್ಲಿ ಕೆಂಪಿಸಿದ್ದನಹುಂಡಿ ಗ್ರಾಪಂಗೆ ಯೋಗೇಶ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಳಿಕ ಮಹಾಮಾರಿ ಕರೊನಾ ಸೋಂಕಿಗೆ ಯೋಗೇಶ್ ಬಲಿಯಾಗಿದ್ದರು. ಇವರ ನಿಧನದಿಂದಾಗಿ ತೆರವಾಗಿದ್ದ ಗ್ರಾಪಂ ಸದಸ್ಯ ಸ್ಥಾನಕ್ಕೆ ಇದೇ ಡಿ.27ರಂದು ಉಪಚುನಾವಣೆ ನಿಗದಿಯಾಗಿತ್ತು.
ಉಪಚುನಾವಣೆಗೆ ಯೋಗೇಶ್ರ ತಮ್ಮ ಕೆ.ಜಿ. ಆನಂದ್ ಸೇರಿ ಗ್ರಾಮದ ಮೂವರು ನಾಮಪತ್ರ ಸಲ್ಲಿಸಿದ್ದರು. ಯೋಗೇಶ್ ಬದುಕಿದ್ದರೆ ಉಪ ಚುನಾವಣೆಯೇ ನಡೆಯುತ್ತಿರಲಿಲ್ಲ. ಯೋಗೇಶ್ ಸ್ಥಾನವನ್ನ ಅವರ ತಮ್ಮನಿಗೆ ಬಿಟ್ಟುಕೊಡುವುದು ಸೂಕ್ತ ಎಂದು ಗ್ರಾಮದ ಮುಖಂಡರು ಅನುಕಂಪದ ಮಾತುಗಳನ್ನಾಡಿ ಇತರ ಇಬ್ಬರು ಸ್ಪರ್ಧಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕೊನೆಗೂ ಅವರಿಬ್ಬರೂ ನಾಮಪತ್ರ ವಾಪಸ್ ಪಡೆದಿದ್ದು, ಯೋಗೇಶ್ರ ತಮ್ಮ ಆನಂದ್ ಅವಿರೋಧ ಆಯ್ಕೆಯಾಗಿದ್ದಾರೆ.(ದಿಗ್ವಿಜಯ ನ್ಯೂಸ್)