

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ವಂದಿತಾ ಶರ್ಮಾ ಮಂಗಳವಾರ ಅಧಿಕಾರ ಸ್ವೀಕಾರ ಮಾಡಿದರು. ಮುಖ್ಯ ಕಾರ್ಯದರ್ಶಿ ಕಚೇರಿಗೆ ಆಗಮಿಸಿದ ವಂದಿತಾ ಶರ್ಮ ಅವರಿಗೆ ನಿಕಟಪೂರ್ವ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಹೂಗುಚ್ಛ ನೀಡಿ ಅಧಿಕಾರ ಹಸ್ತಾಂತರ ಮಾಡಿದರು.
ವಂದಿತಾ ಶರ್ಮಾ ಅಧಿಕಾರಾವಧಿ 2023 ನ.30ಕ್ಕೆ ಅಂತ್ಯಗೊಳ್ಳಲಿದೆ. ಇವರ ಪತಿ ಐಎಸ್ಎನ್ ಪ್ರಸಾದ್, ಪ್ರಸ್ತುತ ಹಣಕಾಸು ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೆ, ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಹುದ್ದೆಯ ಅಧಿಕ ಪ್ರಭಾರವನ್ನೂ ವಹಿಸಿಕೊಂಡಿದ್ದಾರೆ.
ಮೂವರು ಮಹಿಳೆಯರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ವ, ರಾಜ್ಯ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಹಾಗೂ ರಾಜ್ಯ ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮೀ ಶಕ್ತಿ ಕೇಂದ್ರದ ಮೂವರು ಮಹಿಳಾ ಶಕ್ತಿಗಳಾಗಿರುವುದು ವಿಶೇಷ.