ಮಕ್ಕಳಿಗೆ ಕಲ್ಪಿತ ಮದುವೆ: ಕಾರಹುಣ್ಣಿಮೆಯ ಕರಿದಿನದಲ್ಲಿ ಮಿಂದೆದ್ದ ಹೆಗ್ಗನದೊಡ್ಡಿ ಗ್ರಾಮಸ್ಥರು

1126991
Published on

ಯಾದಗಿರಿ: ಸುರಪುರ ತಾಲೂಕಿನ ಹೆಗ್ಗನದೊಡ್ಡಿ ಗ್ರಾಮದಲ್ಲಿ ಕಾರ ಹುಣ್ಣಿಮೆ ಅಂಗವಾಗಿ ಕರಿ ದಿನವಾದ ಶುಕ್ರವಾರ ಮಕ್ಕಳು ಪೈರಿನಲ್ಲಿ ಆಟವಾಡಿದರೆ, ಅತ್ತ ಹಿರಿಯರು ಇಬ್ಬರು ಹೆಣ್ಣು ಮಕ್ಕಳಿಗೆ ವಧು-ವರನ ವೇಷ ತೊಡಿಸಿ ಕಲ್ಪಿತ ಮದುವೆ ಮಾಡಿ ಸಂಭ್ರಮಿಸಿದರು.

ತೆಂಗಿನ ಚಿಪ್ಪುಗಳಲ್ಲಿ ಬೆಳೆಸಿದ ವಿವಿಧ ಧಾನ್ಯಗಳ ಸಸಿಗಳೊಂದಿಗೆ ಶುಕ್ರವಾರ ಊರ ಮುಂದಿನ ಹಳ್ಳ, ಕೆರೆ, ನದಿ ಹಾಗೂ ಬಾವಿಗಳಿಗೆ ತೆರಳಿ ಪೂಜೆ ಸಲ್ಲಿಸಿ ಮಕ್ಕಳಿಗೆ ಕಲ್ಪಿತ ಮದುವೆ ನೆರವೇರಿಸಲಾಯಿತು. ಮಕ್ಕಳು ವಿವಿಧ ಆಟವಾಡಿ ಸಂಭ್ರಮಿಸಿದರು. ಗ್ರಾಮಸ್ಥರು ಕಲ್ಪಿತ ವಧು-ವರರ ಮೆರವಣಿಗೆ ನಡೆಸಿದರು. ಹಿರಿಯರ ಮಾರ್ಗದರ್ಶನದಲ್ಲಿ ಮಕ್ಕಳೇ ಪುರೋಹಿತ ಸೇರಿ ವಿವಿಧ ಜವಾಬ್ದಾರಿ ನಿರ್ವಹಿಸಿ ಗಮನ ಸೆಳೆದರು.

ಕಾರ ಹುಣ್ಣಿಮೆ ರೈತರ ಹಬ್ಬ. ಎತ್ತುಗಳಿಗೆ ಅಲಂಕಾರ ಮಾಡಿ ಪೂಜೆ ಮಾಡಿ ನಂತರ ಮೆರವಣಿಗೆ ನಡೆಸುವುದು ಸಂಪ್ರದಾಯ. ಆದರೆ, ಹೆಗ್ಗನದೊಡ್ಡಿ ಗ್ರಾಮದಲ್ಲಿ ಹುಣ್ಣಿಮೆಯ ಮರು ದಿನ ಕರಿಯಂದು ಮಕ್ಕಳು ಸಸಿ ಹಬ್ಬ ಆಚರಿಸುವುದು ವಿಶೇಷ. ಹಿರಿಯರು ಮಕ್ಕಳಿಗೆ ಕಲ್ಪಿತ ಮದುವೆ ಮಾಡಿ ಸಂಭ್ರಮಿಸುತ್ತಾರೆ. ಇದಕ್ಕಾಗಿ 15 ದಿನಗಳ ಮುಂಚೆಯೇ ಸಿದ್ಧತೆ ನಡೆಸಿರುತ್ತಾರೆ.

ರೈತರು ಬಿತ್ತನೆ ಮಾಡುವುದಕ್ಕೂ ಮುಂಚೆ ಮಕ್ಕಳು ಸಸಿ ಹಾಕುವುದರಿಂದ ರೈತರಿಗೆ ಒಳ್ಳೆಯದಾಗುತ್ತದೆ. ಚೆನ್ನಾಗಿ ಬೆಳೆ ಬರುತ್ತದೆ, ಕಾಲಕಾಲಕ್ಕೆ ಮಳೆ ಆಗಲಿದೆ ಎಂಬ ನಂಬಿಕೆಯಲ್ಲಿ ಕರಿದಿನ ಆಚರಿಸುತ್ತಾರೆ. ವಧು-ವರರು ಸಸಿಗಳನ್ನು ನೆಟ್ಟರೆ ಶುಭ ಸಂಕೇತ. ಹಾಗಾಗಿ ಗ್ರಾಮದ ಪುಟ್ಟ ಹೆಣ್ಣುಮಕ್ಕಳಿಬ್ಬರಿಗೆ ಕಲ್ಪಿತ ಮದುವೆ ಮಾಡಿ ಅವರ ಕೈಯಲ್ಲಿ ಪೈರನ್ನು ನಾಟಿ ಮಾಡಿಸುತ್ತಾರೆ.

ಕರಿ ದಿನದ ಹಬ್ಬದಲ್ಲಿ ಗ್ರಾಮದ ಹಿರಿಯ ಮುಖಂಡರಾದ ದೊಡ್ಡಬಸಯ್ಯಸ್ವಾಮಿ ಹಿರೇಮಠ, ಮಲ್ಲಯ್ಯ ಸ್ವಾಮಿ ಹಿರೇಮಠ, ಸಿದ್ದಣ್ಣ ಅಂಗಡಿ ಸಾಹುಕಾರ್, ಗುರುಲಿಂಗಪ್ಪ ಸಾಹುಕಾರ್, ಚನ್ನಬಸಪ್ಪ ಪೂಜಾರಿ, ಸುರೇಶ ಸಾಹುಕಾರ್, ಶಿವು ಸಾಹುಕಾರ್, ನಿಂಗಣ್ಣ ವಡಿಗೇರ, ಶ್ರೀಶೈಲ್ ಅಂಗಡಿ, ಸುಗಣ್ಣ ಸಾಹುಕಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net