

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮೂರು ವರ್ಷಪೂರ್ಣಗೊಳಿಸುತ್ತಿರುವ ಟಿ.ಎಸ್.ನಾಗಾಭರಣ ಅವರು ಮಂಗಳವಾರ ಸುದ್ದಿಗೋಷ್ಠಿ ನಡೆಸಿದರು. ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕದ ಮರು ಮಂಡನೆಗೆ ಆಗ್ರಹಿಸಿರುವ ನಾಗಾಭರಣ, ಕನ್ನಡ ಕಡೆಗಣನೆ ವಿಚಾರವಾಗಿ 180 ಅಧಿಕಾರಿಗಳಿಗೆ ಪತ್ರ ಕೊಟ್ಟರೂ ಒಬ್ಬರ ವಿರುದ್ಧ ಕ್ರಮ ಜರುಗಿಸಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ವ್ಯವಸ್ಥೆ ಒಳಗೆ ಹೋದಾಗ ಒಳಿತು ಕೆಡಕುಗಳು ಗೊತ್ತಾಗುತ್ತದೆ. ಅದೇ ರೀತಿ ಪ್ರಾಧಿಕಾರದ ಜವಾಬ್ದಾರಿ ತೆಗೆದುಕೊಂಡು ಅನೇಕ ಕೆಲಸ ಮಾಡಲಾಗಿದೆ ಎಂದು ವಿವರಿಸಿದರು. ಇ ಆಡಳಿತಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರ ಮಾಡಿ, ಅದರ ಪರಿಣಾಮ ಇ- ಕನ್ನಡ ಯೋಜನೆ ರೂಪುಗೊಂಡಿತು. ಪದಕಣಜ ಮೊಬೈಲ್ ಆ್ಯಪ್ ಇದಕ್ಕೊಂದು ಉದಾಹರಣೆ. ವೆಬ್ ಸೈಟ್‌ಗಳಿಗೊಂದು ಮಾದರಿ ರೂಪಿಸಲಾಗಿದೆ. ಏಕರೂಪತೆ ತರಲಾಗಿದ್ದು, ಕನ್ನಡಕ್ಕೆ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.
ಕನ್ನಡ ಕಾಯಕ ವರ್ಷ ಆಚರಣೆ, ಬಾಷ್ ಸಂಸ್ಥೆ ಕಾರ್ಮಿಕರ ಸಮಸ್ಯೆಗೆ ಪರಿಹಾರ, ನ್ಯಾಯಾಲಯ ಮತ್ತು ಶಿಕ್ಷಣದಲ್ಲಿ ಕನ್ನಡ ಅನುಷ್ಠಾನಕ್ಕೆ ಪ್ರಯತ್ನ, ಡಿಜಿ ಜಗಲಿ, ಪದಕಣಜದ ಜಾರಿ ಕುರಿತಂತೆ ಮಾಹಿತಿ ನೀಡಿದರು. ವಿದೇಶದಲ್ಲೂ ಕನ್ನಡದ ಬೆಳವಣಿಗೆ ಪ್ರಾಧಿಕಾರ ಕೆಲಸ ಮಾಡಿದೆ. ಸಿಬಿಎಸ್ಸಿ, ಐಸಿಎಸ್ಇ ಯಲ್ಲೂ ಕನ್ನಡ ಅನುಷ್ಠಾನ ಮಾಡಲು ಪ್ರಯತ್ನ ಮಾಡಲಾಗಿದೆ. ಈಗ ಸಮೀಕ್ಷೆ ಮಾಡುವಂತೆ ಪ್ರಾಧಿಕಾರ ಶಿಕ್ಷಣ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.
ಉನ್ನತ ಶಿಕ್ಷಣದಲ್ಲಿ ಕನ್ನಡ ಇರಬೇಕೆಂಬ ವಿಷಯದಲ್ಲಿ ನ್ಯಾಯಾಂಗದಲ್ಲಿ ಹಿನ್ನಡೆಯಾಗಿದೆ. ಆದರೆ ಪ್ರಾಧಿಕಾರ ನ್ಯಾಯಾಂಗ ಹೋರಾಟ ಮುಂದುವರಿಸಿದೆ, ಕೋರ್ಟ್‌ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದೇವೆ. ನಾವು ಉನ್ನತ ಶಿಕ್ಷಣದಲ್ಲಿ ಕನ್ನಡ ಪಂಡಿತರನ್ನು ಮಾಡುತ್ತಿಲ್ಲ, ವ್ಯವಹಾರಿಕ ಕನ್ನಡ ಕಲಿಸುವುದಷ್ಟೇ ಎಂದು ಸ್ಪಷ್ಟಪಡಿಸಿದರು.
ಕನ್ನಡವನ್ನು ಸಂವಿಧಾನಿಕವಾಗಿ ಬಳಸಿಕೊಳ್ಳುವ ಕೆಲಸ ಆಗಬೇಕಾಗಿದೆ ಎಂದ ನಾಗಾಭರಣ, ತಾವು ಪ್ರಾಧಿಕಾರದ ಜವಾಬ್ದಾರಿ ವಹಿಸಿಕೊಂಡ ನಂತರ ಕನ್ನಡ ಕಡೆಗಣನೆ ಮಾಡಿದ 180 ಅಧಿಕಾರಿಗಳಿಗೆ ಪತ್ರ ಕೊಟ್ಟರೂ ಒಬ್ಬರ ವಿರುದ್ಧ ಕ್ರಮವಾಗಿಲ್ಲ ಎಂದು ಬೇಸರಿಸಿದರು. ಎಲ್ಲಿ ಕನ್ನಡ ಮನಸ್ಸು ಕೆಲಸ ಮಾಡುವುದಿಲ್ಲವೋ ಎಲ್ಲಿ ಬದ್ಧತೆ ಇರುವುದಿಲ್ಲವೋ ಅಲ್ಲಿ ಹಿನ್ನಡೆಯಾಗುತ್ತದೆ. ಅವರು ಕನಿಷ್ಠ ಸಭೆಯನ್ನಾದರೂ ಕರೆಯಬೇಕಿತ್ತು, ದಂಡ ವಿಧಿಸುವ ಕೆಲಸವನ್ನಾದರೂ ಮಾಡಬೇಕಿತ್ತು ಎಂದರು.
ಕನ್ನಡ ವಿಷಯದಲ್ಲಿ ಅನೇಕ ವರದಿಗಳು ಬಂದಿವೆ. ಆದರೆ, ಅನುಷ್ಠಾನ ಮಾತ್ರ ಆಗುತ್ತಿರಲಿಲ್ಲ. ಇದೇ ಕಾರಣಕ್ಕೆ ಒಂದೂವರೆ ವರ್ಷದ ಪ್ರಯತ್ನವಾಗಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022ನ್ನು ರೂಪಿಸಲಾಗಿದೆ ಎಂದು ವಿವರಣೆ ನೀಡಿದರು. ಈ ವಿಧೇಯಕ ಕರಡನ್ನು ಸರ್ಕಾರಕ್ಕೆ ಕೊಟ್ಟೆವು, ಬಳಿಕ ಅದು ಒಂದು ರೂಪ ಪಡೆದುಕೊಂಡಿದೆ. ನಾವು ಕೊಟ್ಟ ಕರಡು, ಬದಲಾದದ್ದು ಏನು? ಎಂದು ಸಾರ್ವಜನಿಕವಾಗಿ ಚರ್ಚೆಯಾಗಲಿ. ಚಳಿಗಾಲದ ಅಧಿವೇಶನದಲ್ಲಿ ಸೂಕ್ತ ಬದಲಾವಣೆಗಳೊಂದಿಗೆ ಒಪ್ಪಿಗೆಯಾಗಲಿ ಎಂದರು. ನಾವು ಪ್ರಸ್ತಾಪಿಸಿದ ವಿಧೇಯಕದಲ್ಲಿ ದಂಡ, ಜೈಲು ಶಿಕ್ಷೆ ಪ್ರಸ್ತಾಪವನ್ನು ಮಾಡಲಾಗಿತ್ತು. ಆದರೆ ಮಂಡನೆಯಾದ ಕರಡಿನಲ್ಲಿ ತೀವ್ರತೆ ಕಡಿಮೆ ಮಾಡಿ ರಾಜಿ ಮಾಡುವಂತಹ ಪ್ರಸ್ತಾಪ ಮಾಡಲಾಗಿದೆ ಎಂದು ಹೇಳಿದರು.