ಕರ್ನಾಟಕ ಹೈಕೋರ್ಟ್​ಗೆ ಹಂಗಾಮಿ​ ಮುಖ್ಯ ನ್ಯಾಯಮೂರ್ತಿಯಾಗಿ ಅಲೋಕ್​ ಅರಾಧೆ ನೇಮಕ

jc alok aradhe
Published on

ಬೆಂಗಳೂರು: ಹಿರಿಯ ನ್ಯಾಯಮೂರ್ತಿ ಅಲೋಕ್​ ಅರಾಧೆ ಅವರನ್ನು ರಾಜ್ಯ ಹೈಕೋರ್ಟ್​ನ ಹಂಗಾಮಿ​ ಮುಖ್ಯ ನ್ಯಾಯಮೂರ್ತಿಯಾಗಿ ಕೇಂದ್ರ ಸರ್ಕಾರ ಗುರುವಾರ ನೇಮಕ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್​ ಅವಸ್ಥಿ ಅವರು ಜು.2ರಂದು ನಿವೃತ್ತಿಯಾಗಲಿದ್ದು, ಈ ಸ್ಥಾನ್ಕಕೆ ಮತ್ತೊಬ್ಬರು ನೇಮಕವಾಗುವವರೆಗೆ ಅಲೋಕ್​ ಅರಾಧೆ ಅವರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿದೆ. ರಾಷ್ಟ್ರಪತಿಗಳ ನಿರ್ದೇಶನದ ಮೇರೆಗೆ ಕಾನೂನು ಮತ್ತು ನ್ಯಾಯ ಸಚಿವಾಲಯ ಆದೇಶ ಹೊರಡಿಸಿದ್ದು, ಜು.3ರಿಂದ ಈ ಆದೇಶ ಅನ್ವಯವಾಗಲಿದೆ.

ಅಲಹಾಬಾದ್​ ಹೈಕೋರ್ಟ್​ನ ಲಖನೌ ಪೀಠದಲ್ಲಿ ಹಿರಿಯ ನ್ಯಾಯಮೂರ್ತಿ ಆಗಿ ಸೇವೆ ಸಲ್ಲಿಸುತ್ತಿದ್ದ ರಿತುರಾಜ್​ ಅವಸ್ಥಿ ಅವರನ್ನು 2021ರ ಸೆ.16ರಂದು ಕರ್ನಾಟಕ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸುಪ್ರೀಂಕೋರ್ಟ್​ ಶಿಫಾರಸು ಮಾಡಿತ್ತು. ಅ.18ರಂದು ರಿತುರಾಜ್​ ಅವಸ್ಥಿ ಕರ್ನಾಟಕ ಸಿಜೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಅಲೋಕ್ ಅರಾಧೆ ಹಿನ್ನೆಲೆ: 1964ರ ಏ.13ರಂದು ಜನಿಸಿದ ಅಲೋಕ್ ಅರಾಧೆ ಅವರು ಬಿಎಸ್ಸಿ ಮತ್ತು ಎಲ್‌ಎಲ್‌ಬಿ ಪದವಿ ಪಡೆದಿದ್ದು, 1988ರ ಜು.12ರಂದು ವಕೀಲರಾಗಿ ನೋಂದಾಯಿಸಿಕೊಂಡಿದ್ದರು. 2007ರ ಏಪ್ರಿಲ್‌ನಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ಪಡೆದಿದ್ದ ಅರಾಧೆ, 2009ರ ಡಿ.29ರಂದು ಮಧ್ಯಪ್ರದೇಶದ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2011ರ ಫೆ. 15ರಂದು ಅವರನ್ನು ಕಾಯಂ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಗಿತ್ತು. 2016ರ ಸೆಪ್ಟಂಬರ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ವರ್ಗಾವಣೆಯಾಗಿದ್ದ ನ್ಯಾಯಮೂರ್ತಿ ಅರಾಧೆ, 2018ರ ಮೇ 11ರಂದು ಅದೇ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಬಳಿಕ ಕರ್ನಾಟಕ ಹೈಕೋರ್ಟ್‌ಗೆ ವರ್ಗಾವಣೆಗೊಂಡಿದ್ದ ನ್ಯಾ. ಅರಾಧೆ, 2018ರ ನ. 17ರಂದು ಪ್ರಮಾಣವಚನ ಸ್ವೀಕರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net