‘ತುಳಸಿಗೇರಪ್ಪ’ನಿಗೆ ಸಂಭ್ರಮದ ತೊಟ್ಟಿಲೋತ್ಸವ

A joyful cradle festival for 'Tulasigerappa'
ತುಳಸಿಗೇರಿಯ ಹನುಮಂತದೇವರ ದೇವಸ್ಥಾನದಲ್ಲಿ ಹನುಮಜಯಂತಿ ಅಂಗವಾಗಿ ತೊಟ್ಟಿಲೋತ್ಸವ ನೆರವೇರಿತು.
Published on

ಕಲಾದಗಿ: ಸಮೀಪದ ತುಳಸಿಗೇರಿಯ ಹನುಮಂತ ದೇವರ ದೇವಸ್ಥಾನದಲ್ಲಿ ಶನಿವಾರ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಬೆಳಗ್ಗೆ 4 ಗಂಟೆಗೆ ಹನುಮಂತ ದೇವರಿಗೆ ಅಭಿಷೇಕ ಸೇರಿ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಸಂಪ್ರದಾಯದಂತೆ ಬೆಳಗ್ಗೆ 6.15 ಕ್ಕೆ ಸುಮಂಗಲೆಯರ ಸಮ್ಮುಖದಲ್ಲಿ ಹನುಮಂತ ದೇವರ ‘ತೊಟ್ಟಿಲೋತ್ಸವ’ ನೆರವೇರಿಸಿ ಜೋಗುಳ ಹಾಡಿ ಹೆಸರುಗಳನ್ನಿಟ್ಟು ಆರತಿ ಮಾಡಿದರು. ತದನಂತರ ಲೋಕಾಪುರದ ವೇದಮೂರ್ತಿ ಸುಶಿಲೇಂದ್ರಾಚಾರ್ಯ ರಾ. ಗೋಠೆ ಅವರ ಮುಂದಾಳತ್ವದಲ್ಲಿ ಪವಮಾನ ಹೋಮ ನೆರವೇರಿತು.

ಪಾನಕ ವಿತರಣೆ: ತೊಟ್ಟಿಲೋತ್ಸವದ ನಂತರ ವಿವಿಧೆಡೆಗಳಿಂದ ಆಗಮಿಸಿದ ಸೇವಾಕರ್ತರಿಂದ ಭಕ್ತರಿಗೆ ಪಾನಕ, ಕೋಸಂಬರಿ ಸೇರಿದಂತೆ ಸಿಹಿ ತಿನಿಸು ವಿತರಿಸಲಾಯಿತು. ಮಧ್ಯಾಹ್ನ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ವಿಶೇಷ ಅಲಂಕಾರ: ತೊಟ್ಟಿಲೋತ್ಸವದ ಅಂಗವಾಗಿ ನವರಂಗವನ್ನು ವಿಶೇಷವಾಗಿ ಅಲಂಕಾರಗೊಳಿಸಲಾಗಿತ್ತು. ಜತೆಗೆ ದೇವಾಲಯವನ್ನು ತೋರಣ, ಕೇಸರಿ ತೋರಣ, ಧ್ವಜಗಳಿಂದ ಅಲಂಕರಿಸಿದ್ದು ಗಮನಸೆಳೆಯಿತು.

ದೇವಾಲಯದ ಪೂಜಾರರು ಹಾಗೂ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ತೊಟ್ಟಿಲೋತ್ಸವದಲ್ಲಿ ಪಾಲ್ಗೊಂಡು ಪೂಜಾ ಕೈಂಕರ್ಯಗಳಿಗೆ ಜತೆಯಾದರೆ, ಸಂಸದ ಪಿ.ಸಿ. ಗದ್ದಿಗೌಡರ ಸೇರಿ ಅನೇಕ ಗಣ್ಯರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

ಬಾಗಲಕೊಟೆಯ ಅದ್ವಿತಾ ನ. ದೇಶಪಾಂಡೆ ಅವರಿಂದ ಸಂಜೆ ನಡೆದ ‘ದಾಸವಾಣಿ’ಹಾಗೂ ತುಳಸಿಗೇರಿಯ ಕೃಷ್ಣಾ ವಾರದ ಅವರಿಂದ ಕೊಳಲು ವಾದನದ ಸಂಗೀತ ಸೇವೆ ಗಮನಸೆಳೆಯಿತು. ಇವರಿಗೆ ಬಾಗಲಕೋಟೆಯ ಪ್ರವೀಣ ಮಂಕಣಿ ತಬಲಾ ಹಾಗೂ ಶ್ರೀನಿವಾಸ ಕುಲಕರ್ಣಿ ಹಾರ್ಮೊನಿಯಂ ಸಾಥ್ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net