

ಮದ್ದೂರು: ಪಟ್ಟಣದ ಮಳವಳ್ಳಿ-ಮದ್ದೂರು ಹೆದ್ದಾರಿ ಬದಿಯಲ್ಲಿ ಶನಿವಾರ ರಾತ್ರಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವ ಪತ್ರಕರ್ತ ಮೃತಪಟ್ಟಿದ್ದಾರೆ.
ತಾಲೂಕಿನ ಬೆಸಗರಹಳ್ಳಿ ಗ್ರಾಮದ ಲೇಟ್ ಆರ್.ಮುರುಗನ್ ಪುತ್ರ ಬಿ.ಎ.ಮಧುಕುಮಾರ್ (32) ಮೃತ ಪಟ್ಟ ವ್ಯಕ್ತಿಯಾಗಿದ್ದಾರೆ.
ಮೃತ ಮಧುಕುಮಾರ್ ಪಟ್ಟಣದ ಮಳವಳ್ಳಿ ಮಾರ್ಗದ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ರಸ್ತೆ ಬದಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ತೀವ್ರವಾಗಿ ಅಸ್ವಸ್ಥಗೊಂಡ ಮಧುಕುಮಾರ್ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ.
ಈ ಸಂಬಂಧ ಸಹೋದರ ನೀಡಿದ ದೂರಿನ ಮೇರೆಗೆ ಪಟ್ಟಣದ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿದ ಬಳಿಕ ವಾಸುದಾರರಿಗೆ ಒಪ್ಪಿಸಲಾಯಿತು. ಭಾನುವಾರ ಸ್ವಗ್ರಾಮ ಬೆಸಗರಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಿತು.
ಮೃತನಿಗೆ ಪತ್ನಿ, ಪುತ್ರ ಇದ್ದಾನೆ. ಶಾಸಕ ಕೆ.ಎಂ.ಉದಯ್, ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ರೈತ ಸಂಘಟನೆ ಮುಖಂಡರು ಮೃತರ ಅಂತಿಮ ದರ್ಶನ ಪಡೆದರು. ಆರ್ಥಿಕ ಸಹಾಯ: ಮೃತ ಪತ್ರಕರ್ತ ಬಿ.ಎ.ಮಧುಕುಮಾರ್ ಅವರ ಕುಟುಂಬಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ ಆರ್ಥಿಕ ಸಹಾಯ ಮಾಡಿದರು.