'ಜೊತೆ ಜೊತೆಯಲಿ’ ಧಾರಾವಾಹಿ ತಂಡದಲ್ಲಿ ಕಿರಿಕ್​: ಕಿರುತೆರೆಯಿಂದಲೇ ನಟ ಅನಿರುದ್ಧ್ ಬ್ಯಾನ್?

anirudh
Published on

ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ‘ಜೊತೆ ಜೊತೆಯಲಿ’ ಧಾರಾವಾಹಿಯಿಂದ ಅನಿರುದ್ಧ್ ಹೊರ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸೀರಿಯಲ್​ನಲ್ಲಿ ನಾಯಕನ ಪಾತ್ರ ಆರ್ಯವರ್ಧನ್​ ಆಗಿ ನಟಿಸಿರುವ ಅನಿರುದ್ಧ್​ಗೆ ಸಿನಿಮಾಗಳಿಗಿಂತ ಈ ಧಾರಾವಾಹಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದೆ. ಇದೀಗ ಈ ಸೀರಿಯಲ್ ತಂಡದಲ್ಲಿ ಮನಸ್ತಾಪ ಉಂಟಾಗಿದ್ದು, ​ಅನಿರುದ್ಧ್​ ಅವರನ್ನು ಕೈಬಿಡಲಾಗುತ್ತೆ ಎನ್ನಲಾಗಿದೆ.

ಈ ಬಗ್ಗೆ ಜೀ ಕನ್ನಡ ವಾಹಿನಿ ಕಡೆಯಿಂದಾಗಲಿ, ನಿರ್ದೇಶಕ ಆರೂರು ಜಗದೀಶ್​ ಅವರ ಕಡೆಯಿಂದಾಗಲಿ ಅಥವಾ ನಟ ಅನಿರುದ್ಧ್​ ಅವರಿಂದ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ, ಸದ್ಯದಲ್ಲೇ ಅನಿರುದ್ಧ್​ ಅವರು ಸುದ್ದಿಗೋಷ್ಠಿ ನಡೆಸಿ ಈ ಬಗ್ಗೆ ಮಹತ್ವದ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.

ಅನಿರುದ್ಧ್​ ಅವರನ್ನು ಬ್ಯಾನ್​ ಮಾಡುವ ಬಗ್ಗೆಯೂ ಆಲೋಚಿಸಲಾಗಿದೆಯಂತೆ ಎಂಬ ಸುದ್ದಿಯೂ ಕೆಲವೆಡೆ ಹರಿದಾಡುತ್ತಿದ್ದು, ಅಭಿಮಾನಿಗಳಲ್ಲಿ ಆತಂಕದ ಜತೆಗೆ ಏಕೆ? ಎಂಬ ಪ್ರಶ್ನೆಯೂ ಮೂಡಿದೆ. ಮೂಲಗಳ ಪ್ರಕಾರ ಜೊತೆ ಜೊತೆಯಲಿ ಸೀರಿಯಲ್​ ಸೆಟ್​ನಲ್ಲಿ ಅನಿರುದ್ಧ್​ ಅವರು ಅಸಹಕಾರ ತೋರಿದ್ದಾರೆ ಎನ್ನಲಾಗಿದೆ. ಮತ್ತೊಂದು ಮೂಲ ಹೇಳುವಂತೆ ಒಂದು ದೃಶ್ಯ ಬದಲಾವಣೆ ಮಾಡಲು ಅನಿರುದ್ಧ್ ಹೇಳಿದ್ರಂತೆ. ಅದನ್ನ ಒಪ್ಪದ ನಿರ್ದೇಶಕರು ಧಾರಾವಾಹಿಯಿಂದಲೇ ಅವರಿಗೆ ಕೊಕ್ ಕೊಡ ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನೊಂದು ಮೂಲ ಹೇಳುವಂತೆ ಶೂಟಿಂಗ್​ ಸೆಟ್​ನಲ್ಲಿ ಕಿರಿಕ್​ ಆಗಿದೆ. ಕಿರುತೆರೆಯಿಂದಲೇ ನಟ ಅನಿರುದ್ಧ್ ಬ್ಯಾನ್ ಆಗ್ತಾರೆ ಅಂತ.

ಈ ಕುರಿತು 'ದಿಗ್ವಿಜಯ ನ್ಯೂಸ್'​ ಜತೆ ಮಾತನಾಡಿದ ಅನಿರುದ್ಧ್​, ನಾನೂ ಈ ಸುದ್ದಿಯನ್ನ ಓದುತ್ತಿದ್ದೇನೆ. ಆದ್ರೆ ಈ ಬಗ್ಗೆ ಸೀರಿಯಲ್ ಟೀಂ ಅಥವಾ ಚಾನೆಲ್ ನನಗೆ ಮಾಹಿತಿ ನೀಡಿಲ್ಲ. ಅವರು ಹೇಳಿದ ಮೇಲೆ‌ ನಾನು ಸುದ್ದಿಗೋಷ್ಟಿ ನಡೆಸುತ್ತೇನೆ. ಸದ್ಯಕ್ಕೆ ಈ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಲ್ಲ ಎಂದರು.

ಕಿರುತೆರೆ ಅಸೋಸಿಯೇಷನ್ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಅವರ ಸಮಸ್ಯೆ ಏನು ಅನ್ನೋದು ನನಗೆ ಗೊತ್ತಿಲ್ಲ. ನನ್ನವರೆಗೂ ಅದು ಬಂದಿಲ್ಲ. ಅವರು ಬಂದು ದೂರು ನೀಡಿದರೆ ಕರೆಸಿ ಮಾತನಾಡುತ್ತೇನೆ. ಕಿರುತೆರೆಯಿಂದ‌ ಬ್ಯಾನ್ ಮಾಡುವ ಹಕ್ಕು ನಮಗಿಲ್ಲ. ಖಾಸಗಿ ವಾಹಿನಿ ಮತ್ತು ಸೀರಿಯಲ್ ಟೀಂನವರು ಅವರನ್ನ ದೂರ ಇಡಬಹುದು ಅಷ್ಟೇ ಎಂದರು. ಇನ್ನು ಕೆಲವೇ ಕ್ಷಣದಲ್ಲಿ ಅಂತೆ-ಕಂತೆಗೆಲ್ಲ ತೆರೆ ಎಳೆಯಲಿದ್ದಾರೆ ನಟ ಅನಿರುದ್ಧ್. ಏನಾಯ್ತು? ಎಂದು ಬಹಿರಂಗವಾಗಲಿದೆ.

ಜೊತೆಜೊತೆಯಲಿ ಧಾರಾವಾಹಿ ಆರಂಭವಾದ ಮೊದಲ ವಾರದಲ್ಲೇ 14.7 ಟಿಆರ್​ಪಿ ಪಡೆದಿತ್ತು. ಇಂದಿಗೂ ಕಿರುತೆರೆ ಇತಿಹಾಸದಲ್ಲಿಯೇ ಹೆಚ್ಚು ಟಿಆರ್​ಪಿ ಗಳಿಸಿದ ಮೊದಲ ಧಾರಾವಾಹಿ ಎಂಬ ಖ್ಯಾತಿಗೂ ಪಾತ್ರವಾಗಿತ್ತು. ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟ ಅನಿರುದ್ಧ್, ನಾಯಕಿಯಾಗಿ ಮೇಘಾ ಶೆಟ್ಟಿ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. 45ರ ವಯಸ್ಸಿನ ಉದ್ಯಮಿ ಆರ್ಯವರ್ಧನ್ ಪಾತ್ರದಲ್ಲಿ ಅನಿರುದ್ಧ್, 20ರ ವಯಸ್ಸಿನ ಯುವತಿ ಅನು ಆಗಿ ಮೇಘಾ ಶೆಟ್ಟಿ ಬಣ್ಣ ಹಚ್ಚಿದ್ದು, ಇಬ್ಬರಿಗೂ ಸಾಕಷ್ಟು ಜನಪ್ರಿಯತೆ ತಂದುಕೊಟ್ಟದ್ದು ಇದೇ ದಾರಾವಾಹಿ. ಇವರಿಬ್ಬರ ನಡುವಿನ ವಿನೂತನ ಪ್ರೇಮಕಥೆಯೇ ‘ಜೊತೆ ಜೊತೆಯಲಿ’.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net