

ತುಮಕೂರು: ಪಿಎಸ್ಐ ಹುದ್ದೆ ನೇಮಕಾತಿ ಹಗರಣ ದೇಶಾದ್ಯಂತ ಭಾರೀ ಸುದ್ದಿಯಾಗಿದ್ದು, ಬಗೆದಷ್ಟು ಆಳ ಎಂಬಂತೆ ಅಕ್ರಮ ಬಯಲಾಗುತ್ತಿದೆ. ಇದೀಗ ತುಮಕೂರಲ್ಲಿ ಖತರ್ನಾಕ್ ದಂಪತಿಯ ಮಹಾ ವಂಚನೆ ಬಯಲಾಗಿದೆ.
2019ರಲ್ಲಿ ಪೊಲೀಸ್ ಇಲಾಖೆಯಿಂದ ವಜಾಗೊಂಡಿದ್ದ ಮಹೇಶ್ ಹಾಗೂ ಆತನ ಪತ್ನಿ ಸುಧಾ ನೂರಾರು ಜನರಿಗೆ ವಂಚಿಸಿರುವುದು ದೃಢವಾಗಿದ್ದು, ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾದ ಕೂಡಲೇ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ಯುವಜನರನ್ನು ನಂಬಿಸಿ ಕೋಟ್ಯಂತರ ರೂ. ವಂಚಿಸಿದ್ದಾರೆ. 150ಕ್ಕೂ ಹೆಚ್ಚು ಜನರಿಗೆ ವಂಚಿಸಿರುವ ಆರೋಪ ಕೇಳಿಬಂದಿದ್ದು, ಒಬ್ಬೊಬ್ಬರಿಂದಲೂ 2ರಿಂದ 5 ಲಕ್ಷ ರೂ. ವರೆಗೂ ಹಣ ಪಡೆದು ವಂಚಿಸಿರುವ ಬಗ್ಗೆ ಮಹೇಶ್ ಮತ್ತು ಸುಧಾ ವಿರುದ್ಧ ಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ತುಮಕೂರು ತಾಲೂಕು ಎಲೆರಾಂಪುರ ಮೂಲದ ಮಹೇಶ್, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದರು. ತಿಪಟೂರು, ಪಾವಗಡ, ಕೊರಟಗೆರೆಯಲ್ಲಿ ಕೆಲಸ ಮಾಡಿದ್ದ ಮಹೇಶ್, ತುಮಕೂರು ನಗರದ ತಿಲಕ್ಪಾರ್ಕ್ ಠಾಣೆಯಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿದ್ದರು. ದುರ್ವರ್ತನೆ ತೋರಿದ ಹಿನ್ನೆಲೆಯಲ್ಲಿ 2019ರಲ್ಲೇ ಇವರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಪೊಲೀಸ್ ಇಲಾಖೆಯಲ್ಲಿದ್ದಾಗಲೇ ಬ್ಯಾಂಕ್ಗಳಲ್ಲಿ ಸಾಲ ಕೊಡಿಸುತ್ತೇನೆ ಎಂದು ಸಾಕಷ್ಟು ಜನರಿಗೆ ಮಹೇಶ್ ವಂಚಿಸಿದ್ದ ಎನ್ನಲಾಗಿದ್ದು, ಕೆಲಸ ಕಳೆದುಕೊಂಡ ನಂತರವೂ ನಂಬಿಕೆ ದ್ರೋಹದ ಕೆಲಸ ಮುಂದುವರಿಸಿದ್ದ ಎಂದು ದೂರಲಾಗಿದೆ.
ಮಹೇಶ್ ಪತ್ನಿ ಸುಧಾ ಮಹಿಳೆಯರನ್ನೇ ಗುರಿಯಾಗಿಸಿಕೊಂಡರೆ, ಮಹೇಶ್ ಸಂಬಂಧಿಕರು ಮತ್ತು ಪರಿಚಯಸ್ಥರನ್ನು ನಂಬಿಸಿ 150ಕ್ಕೂ ಹೆಚ್ಚು ಜನರಿಗೆ ಕೆಲಸದ ಆಮಿಷವೊಡ್ಡಿ 2 ಕೋಟಿ ರೂ. ವಸೂಲಿ ಮಾಡಿದ್ದಾ ಮಾಡಿದ್ದಾನೆ ಎನ್ನಲಾಗಿದೆ. ಕೆಲಸ ಕೊಡಿಸದೆ ಸತಾಯಿಸಿದ್ದರಿಂದ ಹಣ ವಾಪಸ್ ಕೇಳಿದವರಿಗೆ ಚೆಕ್ ನೀಡಿ ಅದರಲ್ಲಿಯೂ ವಂಚಿಸಿದ್ದು, ನೂರಾರು ಜನ ಹಣ ಕಳೆದುಕೊಂಡು ಕಂಗಾಲಾಗಿದ್ದಾರೆ. ಅಷ್ಟೇ ಅಲ್ಲ, ವಾಸವಿದ್ದ ಮನೆಯ ತೋರಿಸಿ ಲೀಸ್ ಹಾಕುವುದಾಗಿ ಮೂವರಿಗೆ ವಂಚಿಸಿದ್ದಾನೆ.
ವಾಸವಿದ್ದ ಮನೆಯೇ ಮೂವರಿಗೆ ಲೀಸ್!: ಆರೋಪಿ ಮಹೇಶ್ ವಾಸವಿದ್ದ ಜಯನಗರದ ಮನೆಯನ್ನು ಮೂವರು ಜನರಿಗೆ ಲೀಸ್ ಕೊಟ್ಟಿರುವುದು ಆಶ್ಚರ್ಯ ಮೂಡಿಸಿದೆ. ಮುಂದಿನ ತಿಂಗಳು ನಾನು ಬೇರೆ ಮನೆಗೆ ಶಿಫ್ಟ್ ಆಗುತ್ತೇನೆ ಎಂದು ನಂಬಿಸಿ ಮೂವರಿಂದ ಹಣ ಪಡೆದು ವಂಚಿಸಿದ್ದಾನೆ. ಮೂರು ತಿಂಗಳಲ್ಲಿ ಖಾಲಿ ಮಾಡುವೆ ಎಂದೇಳಿ ಒಬ್ಬರಿಂದ 5 ಲಕ್ಷ ರೂ., 15 ದಿನದಲ್ಲಿ ಖಾಲಿ ಮಾಡುತ್ತೇನೆ ಎಂದು ಮತ್ತೊಬ್ಬರಿಂದ 7 ಲಕ್ಷ ರೂ. ಹಾಗೂ ಮೂರು ದಿನದಲ್ಲಿ ಖಾಲಿ ಮಾಡುತ್ತೇನೆ ಎಂದೇಳಿ 9 ಲಕ್ಷ ರೂಪಾಯಿ... ಹೀಗೆ ಮೂವರಿಗೂ ಲೀಸ್ ಒಡಂಬಡಿಕೆ ಮಾಡಿಕೊಟ್ಟು ಪತ್ನಿ, ಮಕ್ಕಳ ಸಮೇತ ಪರಾರಿಯಾಗಿದ್ದಾನೆ.
ಮೋಸ ಹೋದವರು ದೂರು ನೀಡಲು ಬಂದು ವಾಪಸ್ ಹೋಗಿದ್ದರು. ಈಗ ಮತ್ತೆ ಬಂದು ದೂರು ನೀಡಿದ್ದಾರೆ. ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ. ಮೋಸ ಹೋದವರು ಇದ್ದರೆ ಠಾಣೆಗೆ ಬಂದು ದೂರು ನೀಡಬಹುದು.
| ರಾಹುಲ್ಕುಮಾರ್ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕ
https://www.vijayavani.net/a-man-finds-out-he-has-ovaries-uterus-after-20-yrs/
https://www.vijayavani.net/a-canada-mp-chandra-arya-visit-to-hometown/