ಜೆಎಸ್‌ಎಸ್ ಅಂಗವಿಕಲರ ಪಾಲಿಟೆಕ್ನಿಕ್‌ನಲ್ಲಿ ಉದ್ಯೋಗ ಮೇಳ

jss polytechnic
Published on

ಮೈಸೂರು: ಯಾವುದೇ ಸಮಸ್ಯೆ ಇದ್ದರೂ ಅದನ್ನು ಮೀರಿ ನಿಂತು ಬದುಕು ಕಟ್ಟಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ.ಎಚ್.ಪಿ. ಜ್ಯೋತಿ ಹೇಳಿದರು.

ಸಮರ್ಥನಂ ಅಂಗವಿಕಲರ ಸಂಸ್ಥೆ ಮತ್ತು ಜೆಎಸ್‌ಎಸ್ ಅಂಗವಿಕಲರ ಪಾಲಿಟೆಕ್ನಿಕ್ ವತಿಯಿಂದ ಪಾಲಿಟೆಕ್ನಿಕ್ ಆವರಣದಲ್ಲಿ ಅಂಗವಿಕಲರಿಗೆ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿ, ಕೆಲವು ನ್ಯೂನತೆಯಿಂದ ಅಂಗವಿಕಲರಾಗುತ್ತಾರೆ. ಅಂಗವಿಕಲರು ವೈಕಲ್ಯವನ್ನು ಮೆಟ್ಟಿನಿಂತು ಗುರಿ ಸಾಧಿಸಿ ಇತರರಿಗೆ ಮಾದರಿಯಾಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟೋ ಅಂಗವಿಕಲರು ಉನ್ನತ ಹುದ್ದೆ ಅಲಂಕರಿಸಿದ್ದಾರೆ. ನೀವು ಕೂಡ ಇದೇ ರೀತಿಯಲ್ಲಿ ಉನ್ನತ ಹುದ್ದೆಗಳನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಅಂಗವಿಕಲರ ಪಾಲಿಟೆಕ್ನಿಕ್ ಪ್ರಾಂಶುಪಾಲ ಬಿ.ಇಳಂಗೋವನ್ ಮಾತನಾಡಿ, ಅಂಗವಿಕಲರು ಎಲ್ಲರಂತೆ ಬದುಕಬೇಕು. ಈ ನಿಟ್ಟಿನಲ್ಲಿ ನಾವು ನಿಮ್ಮೊಂದಿಗಿದ್ದೇವೆ ಎನ್ನುವ ಸಂದೇಶವನ್ನು ಈ ಉದ್ಯೋಗ ಮೇಳ ನೀಡುತ್ತಿದೆ. ಅಂಗವಿಕಲರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಜತೆಗೆ ಅವರಿಗೆ ಉದ್ಯೋಗ ನೀಡಿ, ಸ್ವಾವಲಂಬಿ ಬದುಕು ಕಲ್ಪಿಸಿಕೊಡುವತ್ತಲೂ ಆಲೋಚನೆ ಮಾಡಿರುವುದು ಉತ್ತಮ ವಿಚಾರ ಎಂದು ಶ್ಲಾಘಿಸಿದರು.

ಮೇಳದಲ್ಲಿ 350ಕ್ಕೂ ಹೆಚ್ಚು ಅಭ್ಯರ್ಥಿಗಳು ಭಾಗವಹಿಸಿದ್ದರು. ಸ್ಥಳದಲ್ಲೇ 105 ಅಭ್ಯರ್ಥಿಗಳು ಆಯ್ಕೆಗೊಂಡರು. ಟಿವಿಎಸ್, ಐಟಿಸಿ ಫುಡ್, ಫ್ಲಿಪ್‌ಕಾರ್ಟ್, ರಿಲಯನ್ಸ್ ಸೇರಿದಂತೆ 15 ಪ್ರತಿಷ್ಠಿತ ಕಂಪನಿಗಳು ಮೇಳದಲ್ಲಿ ಭಾಗವಹಿಸಿತ್ತು. ಕಾರ್ಯಕ್ರಮದಲ್ಲಿ ಜೆಎಸ್‌ಎಸ್ ಪಾಲಿಟೆಕ್ನಿಕ್‌ನ ಉದ್ಯೋಗ ಮತ್ತು ತರಬೇತಿ ಅಧಿಕಾರಿ ಕೆ.ಕುಶಾಲ್, ಸಮರ್ಥನಂ ಸಂಸ್ಥೆಯ ಮುಖ್ಯಸ್ಥ ಎಂ. ಶಿವರಾಜು, ಸಂಸ್ಥೆಯ ಕೇಂದ್ರೀಯ ಮುಖ್ಯಸ್ಥ ಸುಭಾಷ್ ಚಂದ್ರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net