

ಮುಂಡಗೋಡ: ಮನೆ ಹಾಗೂ ವಾಣಿಜ್ಯ ಮಳಿಗೆಯ ಮೇಲಿನ ಸಾಲ ತೀರಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿ ಮಾನಸಿಕ ಹಿಂಸೆ ನೀಡಿದ ಪರಿಣಾಮ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಗುರುವಾರ ನಡೆದಿದೆ.
ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿನ ಆಭರಣ ಅಂಗಡಿಯ ಮಾಲೀಕ ಆಶ್ರೀತ್ ಮೋಹನ ವೇರ್ಣೆಕರ (45) ಆತ್ಮಹತ್ಯೆ ಮಾಡಿಕೊಂಡವರು.
ಘಟನೆಯ ವಿವರ: ಹುಬ್ಬಳ್ಳಿಯ ಅಬ್ಬಾಸ ಅಲಿ ಚೌಕ್ ನಿವಾಸಿ ಶಂಶುದ್ದಿನ ಅಬ್ದುಲ್ಲತೀಫ್ ಪಟವೇಗರ, ಹುಬ್ಬಳ್ಳಿ ಮರಾಠಗಲ್ಲಿಯ ಕುಶಲಚಂದ್ರ ಬಾಬುಲಾಲ ಜೈನ್,ಉಶಾದೇವಿ ಕುಶಲಚಂದ್ರ ಜೈನ್, ಹುಬ್ಬಳ್ಳಿ ಬಮ್ಮಾಪುರ ಓಣಿಯ ಸಾಧಿಕ ಜಕಾತಿ, ಮುನಾಫ್ ಪಟವೇಗರ, ಹುಬ್ಬಳ್ಳಿ ಸಿಬಿಟಿಯ ಜಾವೀದ ಅಹ್ಮದ ಬ್ಯಾಳಿ ಎಂಬವರು ಹುಬ್ಬಳ್ಳಿಯ ಗಾರ್ಡನ್ ಪೇಟದಲ್ಲಿರುವ ವಾಸದ ಮನೆ ಹಾಗೂ ವಾಣಿಜ್ಯ ಮಳಿಗೆಯನ್ನು ನನ್ನ ಗಂಡನಿಗೆ ಖರೀದಿ ಮಾಡಿಸಿಕೊಟ್ಟಿದ್ದರು. ಖರೀದಿ ವೇಳೆ ಆಸ್ತಿಯ ಮೇಲಿನ 1.30 ಕೋಟಿ ರೂ. ಬೋಜಾ ಹಾಗೂ ಸಾಲಗಳನ್ನು ತೀರಿಸುತ್ತೇವೆ ಎಂದು ಹಣ ಪಡೆದು ಖರೀದಿ ಮಾಡಿಸಿಕೊಟ್ಟಿದ್ದರು. ಅನಂತರ ಆಸ್ತಿಯ ದಾಖಲೆಗಳಲ್ಲಿ ಸಾಲ ಹಾಗೆ ಉಳಿದಿದೆ.
ಈ ಕುರಿತು ನನ್ನ ಪತಿ ಆರೋಪಿತರಿಗೆ ಕೇಳಿದರೆ ನಾವು ದುಡ್ಡು ವಾಪಸ್ ಕೊಡುವುದಿಲ್ಲ. ಸಾಲವನ್ನು ತೀರಿಸುವುದಿಲ್ಲ. ಸತ್ತರೆ ಸಾಯಿ ಅಂತ ಮಾನಸಿಕ ಹಿಂಸೆ ನೀಡಿದ್ದಾರೆ. ಇದರಿಂದ ಮನನೊಂದ ನನ್ನ ಪತಿ ಬುಧವಾರ ರಾತ್ರಿ ವಿಷ ಸೇವಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ ಎಂದು ಆಶ್ರೀತ್ ಪತ್ನಿ ತೇಜಸ್ವಿನಿ ವೇರ್ಣೆಕರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.