

ಬೆಂಗಳೂರು: ಭಾರೀ ಮಳೆಯಿಂದ ಜಕ್ಕೂರಿನ ರಾಜೇನಹಳ್ಳಿ ಕೆರೆ ಪಕ್ಕದಲ್ಲಿರುವ ಜವಹಾರಲಾಲ್ ನೆಹರು ಸಂಶೋಧನಾ ಕೇಂದ್ರ ಜಲಾವೃತಗೊಂಡಿದ್ದು, ಸಂಶೋಧನೆಗೆ ಸಂಗ್ರಹಿಸಿಟ್ಟಿದ್ದ ಸ್ಯಾಂಪಲ್ಸ್ ನೀರುಪಾಲಾಗಿದೆ. ಮೊನ್ನೆ ರಾತ್ರಿಯಿಂದ ಸುರಿದ ಧಾರಾಕಾರ ಮಳೆಗೆ ಸುಮಾರು 24 ಎಕರೆ ವ್ಯಾಪ್ತಿಯ ಕ್ಯಾಂಪಸ್ ಸಂಪೂರ್ಣ ಜಲಾವೃತಗೊಂಡಿದೆ. ಭಾರತ ರತ್ನ ಪ್ರೊ.ಸಿ.ಎನ್.ಆರ್. ರಾವ್ ಅವರು ಕಟ್ಟಿದ ಸಂಸ್ಥೆ ಇದು.
110ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಸಂಶೋಧನಾ ವಿದ್ಯಾರ್ಥಿಗಳಿರುವ ಈ ಕೇಂದ್ರದಲ್ಲಿ ಮಳೆ ಸೃಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಮಳೆ ನೀರಿನ ಜತೆಗೆ ಕೊಳಚೆ ನೀರು ಕೂಡ ಈ ಕೇಂದ್ರದೊಳಕ್ಕೆ ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಕ್ಯಾಂಪಸ್ ಒಳಗೆ ಹಾವು, ಕಪ್ಪೆ, ಮೀನುಗಳೂ ಮಳೆ ನೀರಿನ ಜತೆ ಬಂದಿವೆ.
ದಶಕಗಳಿಂದ ಸಾಕಷ್ಟು ಸಂಶೋಧನೆ ಮಾಡಿ ಸಂಗ್ರಹಿಸಿಟ್ಟಿದ್ದ ಸ್ಯಾಂಪಲ್ಸ್ ಕೂಡ ನೀರು ಪಾಲಾಗಿದೆ. ಕಂಪ್ಯೂಟರ್, ಪರಿಕರಗಳೂ ಹಾನಿಯಾಗಿವೆ. ಇದರಿಂದ ಮನನೊಂದ ಸಂಶೋಧನಾ ವಿದ್ಯಾರ್ಥಿ ಅರುಣ್, ನಾವು ಎಚ್ಐವಿ ಲ್ಯಾಬ್ನಲ್ಲಿ ಕೆಲಸ ಮಾಡುತ್ತಿದ್ದೇವೆ. ಕರೊನಾ ವೈರಸ್ ಮೇಲೂ ಸಂಶೋಧನೆ ಮಾಡುತ್ತಿದ್ದೇವೆ. ಎಲ್ಲ ಸ್ಯಾಂಪಲ್ ರೂಂ ಟೆಂಪರೇಚರ್ಗೆ ಬಂದಿದೆ. ಎಚ್ಐವಿ, ಕರೊನಾ ವೈರಸ್ ಹೇಗೆ ಚೇಂಜ್ ಆಗುತ್ತೆ ಎಂದು ತುಂಬಾ ಕಷ್ಟ ಪಟ್ಟು ಸಂಶೋಧನೆ ಮಾಡುತ್ತಿದ್ವಿ. ಮಳೆ ನೀರು ನುಗ್ಗಿ ಎಲ್ಲವೂ ಕೈ ತಪ್ಪಿ ಹೋಗಿದೆ. ಎಲ್ಲ ಫ್ರಿಜ್ ಆಫ್ ಆಗಿದೆ, ನಾವು ಇಟ್ಟಿದ್ದ ಸ್ಯಾಂಪಲ್ಸ್ ಎಲ್ಲ ಹಾಳಾಗಿದೆ. ಪುನಃ ಅವುಗಳನ್ನು ರಿಕವರಿ ಮಾಡಲು ಆಗಲ್ಲ ಎಂದು ಭಾವುಕರಾದರು.
ಮಳೆ ಹಾನಿ ಕುರಿತು ಸಿಎಂ ಬೊಮ್ಮಾಯಿ ಮಂಗಳವಾರ ಬೆಳಗ್ಗೆ ಜವಹಾರಲಾಲ್ ನೆಹರು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಭಾರತ ರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರನ್ನು ಭೇಟಿ ಮಾಡಿ ಸಂಶೋಧನಾ ಕೇಂದ್ರದಲ್ಲಿ ಆಗಿರುವ ನಷ್ಟದ ಬಗ್ಗೆ ಸಿಎಂ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕಳೆದ ಎರಡು ದಿನಗಳಿಂದ ನೀರು ನಿಂತು ಅವಾಂತರ ಆಗಿದೆ. ಕ್ಯಾಂಪಸ್ ಮಾತ್ರ ಅಲ್ಲ, ಕಟ್ಟಡದ ಒಳಗೂ ನೀರು ನುಗ್ಗಿದೆ. ಸಿಎನ್‌ಆರ್ ರಾವ್ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. 138 ಎಂಎಂ ಮಳೆ ಇಲ್ಲಿ ಆಗಿದೆ. ಪಕ್ಕದ ಎರಡು ಕೆರೆಗಳು ತುಂಬಿರುವ ಕಾರಣ ಪ್ರವಾಹ ಆಗಿದೆ. ಈ ಸಂಶೋಧನಾ ಕೇಂದ್ರ ಕೆರೆಯ ಒಂದು ಭಾಗವೇ ಆಗಿತ್ತು. ಸಂಸ್ಥೆ ಜೊತೆ ಪಾಲಿಕೆ ಕೂಡ ಇಲ್ಲಿ ಇರುತ್ತೆ. ಮುಂದಿನ ದಿನಗಳಲ್ಲಿ ಪ್ರವಾಹ ಆಗದಂತೆ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಲಿದ್ದೇವೆ. ಬೆಂಗಳೂರಿನಲ್ಲಿ ರಾಜಕಾಲುವೆ ಮೇಲೆ ನಿರ್ಮಾಣ ಮಾಡಿರುವ ಕಟ್ಟಡಗಳು ತೆರವು ಮಾಡಲಾಗುತ್ತೆ. ಬಫರ್ ಝೋನ್ನಲ್ಲಿ ನಿರ್ಮಾಣ ಮಾಡಲಾಗಿರುವ ಕಟ್ಟಡಗಳಿಗೆ ನೋಟಿಸ್ ಕೊಡಲಾಗುತ್ತೆ. ಈ ಮಳೆ ಸಂಬಂಧ ನನಗೆ ಕರೆ ಮಾಡಿ ಪ್ರಧಾನಿ ಮೋದಿ ಅವರು ಮಾತಾಡಿದ್ದಾರೆ ಎಂದರು.