ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಸ್ಪೆಕ್ಟ್ರಂ -2025

jjjjjjj
Published on



ಮಂಗಳೂರು : ಹೃದಯಾಘಾತದಿಂದ ಸಂಭವಿಸುವ ಸಾವು ತಡೆಯಲು ಹಬ್ ಮತ್ತು ಸ್ಪೋಕ್ ಮಾದರಿ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ದ.ಕ.ಹಾಗೂ ಉಡುಪಿಯ ತಾಲೂಕು ಆಸ್ಪತ್ರೆಗಳು ಸೇರಿದಂತೆ ರಾಜ್ಯದ 90 ತಾಲೂಕು ಆಸ್ಪತ್ರೆಗಳಲ್ಲಿ ಈ ಮಾದರಿ ಅಳವಡಿಸಲಾಗಿದ್ದು , ಪರಿಸ್ಥಿತಿಯನ್ನು ಪರಿಗಣಿಸಿ ತ್ವರಿತವಾಗಿ ಸುಧಾರಿತ ಹೃದಯ ಚಿಕಿತ್ಸೆಗಳನ್ನು ಈ ಕೇಂದ್ರಗಳಲ್ಲಿ ನೀಡಲು ಸಾಧ್ಯವಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ, ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಗರದ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಜರಗಿದ ಸ್ಪೆಕ್ಟ್ರಂ -2025 ಹೃದಯ ರಕ್ತನಾಳದ ಚಿಕಿತ್ಸೆ -ನವೀನ ಸಂಶೋಧನೆ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರು ಕೂಡಾ ಈಗ ಹೃದಯಾಘಾತಕ್ಕೆ ಒಳಗಾಗುತ್ತಿದ್ದು, ಇತ್ತೀಚೆಗೆ ಹೃದಯಾಘಾತಕ್ಕೆ ಒಳಗಾದವರಲ್ಲಿ ಶೇ.30ರಷ್ಟು ಮಂದಿ 40ರ ಹರೆಯದವರು. ಇದು ಕಳವಳಕಾರಿ ಅಂಶ ಎಂದರು. ಬದಲಾದ ಜೀವನ ಶೈಲಿಯಿಂದಾಗಿ ಹೃದಯಾಘಾತ, ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಬ್ರೈನ್ ಸ್ಟ್ರೋಕ್ ಹೆಚ್ಚಾಗುತ್ತಿದೆ. ಯುವ ಪೀಳಿಗೆಯಲ್ಲಿ ಸ್ಕ್ರೀನ್ ಅಡಿಕ್ಷನ್ ಮತ್ತು ಏಕಾಂಗಿತನ ಇತ್ತೀಚಿನ ಹೊಸ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.
*ಗುಣಮಟ್ಟದ ಆರೋಗ್ಯ ಸೇವೆ
ಮಿತದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಇಂದಿನ ಅಗತ್ಯವಾಗಿದೆ. ಇಂದು ವೈದ್ಯರು ರೋಗಿಯನ್ನು ಸ್ಪರ್ಶಿಸದೆ, ಆತನ ಸಮಸ್ಯೆಯನ್ನು ಸರಿಯಾಗಿ ಆಲಿಸದೆ ಚಿಕಿತ್ಸೆ ನೀಡುವ ಪರಿಪಾಠವಿದೆ. ಇದು ಸರಿಯಲ್ಲ. ವೈದ್ಯರು ಟಾಕ್, ಟಚ್ ಮತ್ತು ಟ್ರೀಟ್ ಈ ಅಂಶಗಳನ್ನು ಅಳವಡಿಸಿಕೊಂಡರೆ ಮಾತ್ರ ರೋಗಿಗೆ ಟ್ರಸ್ಟ್ (ವಿಶ್ವಾಸ) ಮೂಡಲು ಸಾಧ್ಯ. ದೇಶದ 700ಕ್ಕೂ ಅಧಿಕ ಮೆಡಿಕಲ್ ಕಾಲೇಜುಗಳಲ್ಲಿ ಪ್ರತೀ ವರ್ಷ 1.18 ಲಕ್ಷ ವೈದ್ಯಕೀಯ ಪದವೀಧರರು, 75 ಸಾವಿರ ಸ್ನಾತಕೋತ್ತರ ವೈದ್ಯಕೀಯ ಪದವೀಧರರು ಹೊರ ಬರುತ್ತಿದ್ದಾರೆ. 2030ರಲ್ಲಿ ವೈದ್ಯಕೀಯ ಕ್ಷೇತ್ರದಲ್ಲೂ ಉದ್ಯೋಗದ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇದೆ ಎಂದು ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯ ಪಟ್ಟರು.
*ಗ್ರಾಮೀಣ ಭಾಗದಲ್ಲಿ ಸೇವೆ
ಹೃದಯಾಘಾತದಿಂದ ಉಂಟಾಗುವ ಸಾವುಗಳ ಪ್ರಮಾಣ ನಗರ ಪ್ರದೇಶದಲ್ಲಿ ಶೇ.2 ಇದ್ದರೆ, ಗ್ರಾಮೀಣ ಭಾಗದಲ್ಲಿ ಶೇ.22ರಷ್ಟಿದೆ. ವೈದ್ಯಕೀಯ ಪದವಿ ಪಡೆದವರು ನಗರಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶದಲ್ಲಿ ಸೇವೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ಸೇವೆ ನೀಡುವ ಯುವ ವೈದ್ಯರಿಗೆ ಹೆಚ್ಚಿನ ವೇತನ ನೀಡಬೇಕು. ಸ್ನಾತಕೋತ್ತರ ನೀಟ್ ಪರೀಕ್ಷೆಯಲ್ಲಿ ವಿಶೇಷ ಆದ್ಯತೆ ಕಲ್ಪಿಸಬೇಕು ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ 60 ಕೋಟಿ ಮಂದಿ ಇದ್ದು,ಈಗಾಗಲೇ 7 ಕೋಟಿ ಮಂದಿ ಚಿಕಿತ್ಸೆ ಪಡೆದಿದ್ದಾರೆ. ಯೋಜನೆಯ ವ್ಯಾಪ್ತಿಯಡಿ ಹಿಂದಿನ ಪ್ಯಾಕೇಜ್ ದರವಿದ್ದು, ಅದನ್ನು ಪರಿಷ್ಕರಣೆ ಮಾಡುವುದು ಅಗತ್ಯವಾಗಿದೆ.
ಕೆಲವು ಚಿಕಿತ್ಸೆಗಳು ಯೋಜನೆಯ ಹೊರಗಿದ್ದು, ಅವುಗಳನ್ನು ಸೇರ್ಪಡೆ ಮಾಡಬೇಕಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಅನುದಾನ ಒದಗಿಸಬೇಕು. ಕೇಂದ್ರದ ಅಂಕಿಅಂಶ ಪ್ರಕಾರ ಕರ್ನಾಟಕದಲ್ಲಿ 69ಲಕ್ಷ ಬಿಪಿಎಲ್ ಕಾರ್ಡ್‌ದಾರರು ಇರಬೇಕು. ಆದರೆ ರಾಜ್ಯ ಸರ್ಕಾರದ ಪ್ರಕಾರ 1.15 ಕೋಟಿ ಕಾರ್ಡ್‌ದಾರರು ಇದ್ದಾರೆ. ಶ್ರೀಮಂತ ಬಿಪಿಎಲ್ ಕಾರ್ಡ್‌ದಾರರು ಇರುವ ಕಾರಣ ಬಡವರಿಗೆ ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.ಎ.ಜೆ. ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸ್ಪೆಕ್ಟ್ರಂನ ಸಲಹೆಗಾರರಾದ ಡಾ.ಪ್ರಶಾಂತ್ ಮಾರ್ಲ, ಡಾ.ಅಮಿತಾ.ಪಿ.ಮಾರ್ಲ, ಡಾ.ಅಶೋಕ್ ಹೆಗ್ಡೆ , ಸಂಘಟನಾ ಕಾರ್ಯದರ್ಶಿ ಡಾ.ಆರ್.ಪುರುಷೋತ್ತಮ್ ಉಪಸ್ಥಿತರಿದ್ದರು. ಸಂಘಟನಾ ಚೇರ್ಮನ್ ಡಾ.ಬಿ.ವಿ.ಮಂಜುನಾಥ್ ಸ್ವಾಗತಿಸಿ, ಡಾ.ಪ್ರೇಮ್ ಆಳ್ವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net