ಕಾನೂನಿನ ಮುಂದೆ ಎಲ್ಲರೂ ಒಂದೇ... ಅಮೃತ್​ ಪೌಲ್​ ಬಂಧನವೇ ಇದಕ್ಕೆ ಸಾಕ್ಷಿ: ಐಪಿಎಸ್​ ಅಧಿಕಾರಿ ಡಿ.ರೂಪಾ

roopa
Published on

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಕರ್ನಾಟಕ ಪೊಲೀಸ್​ ಇಲಾಖೆಯ ಮಾನ ಹರಾಜು ಹಾಕಿದ್ದ 545 ಪಿಎಸ್​ಐ ಹುದ್ದೆಗಳ ನೇಮಕಾತಿ ಹಗರಣ ಬಗೆದಷ್ಟು ಆಳ ಎಂಬಂತಾಗಿದೆ. ಇದೇ ಮೊದಲ ಬಾರಿಗೆ ಎಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರ ಬಂಧನವಾಗಿದ್ದು, ರಾಜ್ಯದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ. ಐಪಿಎಸ್​ ಅಧಿಕಾರಿ ಅಮೃತ್​ ಪೌಲ್​ ಅವರನ್ನ ಸೋಮವಾರ ಸಿಐಡಿ ಬಂಧಿಸಿದ್ದು, ಇದರ ಬೆನ್ನಲ್ಲೇ ಐಪಿಎಸ್​ ಅಧಿಕಾರಿ ಡಿ.ರೂಪಾ, 'ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ' ಎಂದು ಮಾಡಿರುವ ಟ್ವೀಟ್​ ಕುತೂಹಲ ಮೂಡಿಸಿದೆ.

'ಐಪಿಎಸ್ ಅಧಿಕಾರಿಗಳ ಮೇಲೆ ಯಾವುದೇ ಶಿಸ್ತುಕ್ರಮ ಆಗುವುದಿಲ್ಲ ಎಂದು ಬಹಳಷ್ಟು ಜನ ನನಗೆ ಹೇಳುತ್ತಿದ್ದರು. ಆದರೆ ಆ ಮಾತು ಸುಳ್ಳು. ಮೊಟ್ಟ ಮೊದಲ ಬಾರಿಗೆ ರಾಜ್ಯದಲ್ಲಿ ನಡೆದ ಎಡಿಜಿಪಿ ದರ್ಜೆಯ ಐಪಿಎಸ್ ಅಧಿಕಾರಿಯ ಬಂಧನವೇ ಇದಕ್ಕೆ ಸಾಕ್ಷಿ. ಕಾನೂನಿನ ಮುಂದೆ ಎಲ್ಲರೂ ಒಂದೇ. ಅಖಿಲ ಭಾರತ ಸಿವಿಲ್ ಸೇವಾ ನಿಯಮದಡಿ ಬಂಧನವಾದರೆ ಸಸ್ಪೆಂಡ್ ಕೂಡ ಮಾಡಲೇಬೇಕಾಗುತ್ತದೆ' ಎಂದು ರೂಪಾ ಟ್ವೀಟ್​ ಮಾಡಿದ್ದಾರೆ.

ಸಬ್​ ಇನ್​ಸ್ಪೆಕ್ಟರ್​ ಹುದ್ದೆಗಳ ನೇಮಕಾತಿ ಅಕ್ರಮದ ವಹಿವಾಟು ನೇಮಕಾತಿ ವಿಭಾಗದ ಕಚೇರಿಯಲ್ಲೇ ನಡೆದಿರುವ ಅನುಮಾನ ಆರಂಭದಲ್ಲೇ ದಟ್ಟವಾಗಿತ್ತು. ಪರೀಕ್ಷೆಯಲ್ಲಿ ಅಕ್ರಮ ನಡೆದ ವೇಳೆ ನೇಮಕಾತಿ ವಿಭಾಗದ ಎಡಿಜಿಪಿ ಆಗಿದ್ದ ಅಮೃತ್ ಪೌಲ್ ಅವರೇ ಡೀಲ್​ ಕುದುರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಹಾಗಾಗಿ ಮೊದಲ ತಲೆದಂಡ ಎಂಬಂತೆ ಏ.27ರಂದೇ ಅಮೃತ್ ಪೌಲ್ ಅವರನ್ನ ಬೆಂಗಳೂರಿನ ಆಂತರಿಕ ವಿಭಾಗಕ್ಕೆ ಎತ್ತಂಗಡಿ ಮಾಡಲಾಗಿತ್ತು. ಬಳಿಕ ಇದೇ ಪ್ರಕರಣ ಸಂಬಂಧ ಈ ಹಿಂದೆ ಮೂರು ಬಾರಿ ಸಿಐಡಿ ಕಚೇರಿಗೆ ಆಗಮಿಸಿ ವಿಚಾರಣೆ ಎದುರಿಸಿದ್ದರು. ಇಂದು ನಾಲ್ಕನೇ ಬಾರಿ ವಿಚಾರಣೆಗೆ ಹಾಜರಾದಾಗ ಸಿಐಡಿ ಬಂಧಿಸಿದೆ. ಇವರನ್ನ 13 ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ನ್ಯಾಯಾಲಯ ನೀಡಿದ್ದು, ವಿಚಾರಣೆಯಲ್ಲಿ ಮತ್ತಷ್ಟು ದೊಡ್ಡವರ ಹೆಸರು ಹೊರಬರುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net