ಕುಪ್ಪೂರು ಗದ್ದುಗೆ ಮಠದ ಡಾ.ಯತೀಶ್ವರ ಶಿವಾಚಾರ್ಯ ಶ್ರೀಗಳ ಸಾವಿನ ತನಿಖೆ ಶುರು!

kappuru gadduge shri
Published on

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಕುಪ್ಪೂರು ಗದ್ದುಗೆ ಸಂಸ್ಥಾನ ಮಠದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ(48) ಅವರು ಸೆ.25ರಂದು ಶಿವೈಕ್ಯರಾದರು. ಇದೀಗ ಶ್ರೀಗಳ ಸಾವಿನ ಬಗ್ಗೆ ಆರೋಗ್ಯ ಇಲಾಖೆ ತನಿಖೆಗೆ ಮುಂದಾಗಿದೆ.

ಶ್ರೀಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದ್ದರೂ ಆರಂಭದ ಚಿಕಿತ್ಸೆ ನೀಡಿದ್ದ ಸ್ಥಳೀಯ ವೈದ್ಯರು ಉದಾಸೀನತೆ ತೋರಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ತನಿಖೆ ನಡೆಸಲಾಗುತ್ತಿದೆ. ಸ್ವಾಮೀಜಿ ಅವರಲ್ಲಿ ಕೆಮ್ಮು ಕಾಣಿಸಿಕೊಂಡಾಗ ಅವರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ನೀಡದೆ ಶಿವಪೂಜೆಗೆ ಅವಕಾಶ ಮಾಡಿಕೊಟ್ಟಿದ್ದು ಆರೋಗ್ಯ ಹದಗೆಡಲು ಕಾರಣವಾಗಿದೆ ಎನ್ನಲಾಗಿದೆ. ಈ ಕುರಿತು ತನಿಖೆ ನಡೆಸಲು ಸ್ಥಳಕ್ಕೆ ಭೇಟಿ ನೀಡಲಾಗುವುದು ಎಂದು ಡಿಎಚ್​ಒ ಡಾ.ನಾಗೇಂದ್ರಪ್ಪ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಕರೊನಾ ಕಾಣಿಸಿಕೊಂಡಾಗ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಮಾರ್ಗಸೂಚಿ ನೀಡಿದ್ದು, ಇದನ್ನು ಅನುಸರಿಸದೆ ಉದಾಸೀನತೆ ತೋರಿರುವ ಬಗ್ಗೆ ತನಿಖೆ ನಡೆಸಲಾಗುವುದು, ತಪ್ಪು ಕಂಡುಬಂದರೆ ಸ್ಥಳೀಯ ವೈದ್ಯರಿಗೆ ನೋಟಿಸ್ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸೆ.24ರಂದು ಜ್ವರದಿಂದ ಬಳಲುತಿದ್ದ ಡಾ.ಯತೀಶ್ವರ ಸ್ವಾಮೀಜಿ ಅವರಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ತುಮಕೂರಿನ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ವಾಮೀಜಿ ಅವರಿಗೆ ಕರೊನಾ ಸೋಂಕು ಕೂಡ ದೃಢಪಟ್ಟಿತ್ತು, ಮಧುಮೇಹ ಸಮಸ್ಯೆಯೂ ಇತ್ತು. ಸೆ.25ರ ಬೆಳಗ್ಗೆ ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಮಣಿಪಾಲ್​ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಲಾಗಿತ್ತು. ಅಂದು ಬೆಳಗ್ಗೆ 11ಕ್ಕೆ ಆಂಬುಲೆನ್ಸ್​ನಲ್ಲಿ ಸಿದ್ಧಗಂಗಾ ಆಸ್ಪತ್ರೆಯಿಂದ ಬೆಂಗಳೂರಿಗೆ ಕರೆದೊಯ್ಯುವ ಮಾರ್ಗಮಧ್ಯೆ ನೆಲಮಂಗಲ ಸಮೀಪ ಹೃದಯ ಸ್ತಂಭನವಾದ ಸ್ವಾಮೀಜಿ ಅವರನ್ನು ಹತ್ತಿರದ ಹರ್ಷ ಆಸ್ಪತ್ರೆಗೆ ಕರೆದೊಯ್ದರಾದರೂ ಅಷ್ಟರಲ್ಲಾಗಲೇ ಸ್ವಾಮೀಜಿ ಉಸಿರಾಟ ನಿಲ್ಲಿಸಿದ್ದರು.

ಸ್ವಾಮೀಜಿ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಹೇಮಾವತಿ ನೀರು ಹರಿಸಲು ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರೂ, ಪ್ರಗತಿಪರ ಚಿಂತಕರು. ಎಲ್ಲರನ್ನೂ ಕೈಬೀಸಿ ಕರೆದು ಎಲ್ಲರೊಳಗೊಬ್ಬರಾಗಿದ್ದವರು, ಕೊಬ್ಬರಿ ಬೆಲೆ ಹೆಚ್ಚಳ ಸೇರಿ ತಾಲೂಕಿನ ಹಲವಾರು ಹೋರಾಟದಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net