

ಬೆಂಗಳೂರು: ಕೆಆರ್ಎಸ್ ಅಣೆಕಟ್ಟೆ ಸುರಕ್ಷತೆ ದೃಷ್ಟಿಯಿಂದ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಮಟ್ಟ ಹಾಕಬೇಕು ಎಂದು ಸರ್ಕಾರದ ಮೇಲೆ ಒತ್ತಡ ಮುಂದುವರಿಸಿರುವ ಸಂಸದೆ ಸುಮಲತಾ ಅಂಬರೀಶ್ ಶನಿವಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ರಾಜಭವನಕ್ಕೆ ಧಾವಿಸಿದ ಸುಮಲತಾ, ನೂತನ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರಿಗೆ ಶುಭಾಶಯ ಕೋರುವ ಜತೆಗೆ ಅಕ್ರಮ ಗಣಿಗಾರಿಕೆ ತಡೆಯಲು ಕೋರಿ ಮನವಿಪತ್ರ ಸಲ್ಲಿಸಿದ್ದಾರೆ. ಈ ಮನವಿಗೆ ಸ್ಪಂದಿಸಿದ ಗೆಹಲೋತ್, ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವ ಭರವಸೆಯನ್ನೂ ಕೊಟ್ಟಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ, ಅಕ್ರಮ ಗಣಿಗಾರಿಕೆಯ ದುಷ್ಪರಿಣಾಮದ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿರುವೆ ಎಂದರು. ದರ್ಶನ್ ಹೆಸರಲ್ಲಿ ವಂಚನೆ ಯತ್ನ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸುಮಲತಾ, ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವಿನ ಜಗಳದ ಬಗ್ಗೆ ಗೊತ್ತಿಲ್ಲ. ಅನಾವಶ್ಯಕ ಹೇಳಿಕೆ ಕೊಡುವುದು ಸರಿಯಲ್ಲ, ಆ ಕುರಿತು ಮಾತನಾಡಲು ಇಷ್ಟವಿಲ್ಲ. ಮೈಸೂರು ಹೋಟೆಲ್ನಲ್ಲಿ ಹಲ್ಲೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಶೀಘ್ರ ಸತ್ಯಾಂಶ ಹೊರಬರಲಿದೆ ಎಂದರು.