ಕಂಠದಲ್ಲಿ ಶ್ರೀಕೃಷ್ಣ! ಗಂಟಲು ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಗೆ ಕಾದಿತ್ತು ಶಾಕ್​

krishna
Published on

ಬೆಳಗಾವಿ: ವ್ಯಕ್ತಿಯೊಬ್ಬರ ಕಂಠದಲ್ಲಿ ಸೇರಿಕೊಂಡಿದ್ದ ಕೃಷ್ಣನನ್ನು ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ. ಇದೇನಿದು? ಕಂಠದಲ್ಲಿ ಕೃಷ್ಣ ಇದ್ದನೇ? ಎಂದು ಆಶ್ಚರ್ಯ ಆಗೋದು ಸಹಜ. ನಿಜವಾಗಿಯೂ ವ್ಯಕ್ತಿಯೊಬ್ಬರ ಕಂಠದಲ್ಲಿ ಶ್ರೀಕೃಷ್ಣ ಇದ್ದ!

45 ವರ್ಷದ ವ್ಯಕ್ತಿಯೊಬ್ಬರಿಗೆ ದೇವರ ತೀರ್ಥ ಸೇವನೆ ಮಾಡುವ ಅಭ್ಯಾಸ ಇತ್ತು. ಎಂದಿನಂತೆ ತೀರ್ಥ ಸೇವನೆ ಮಾಡುವಾಗ ಅದರಲ್ಲಿದ್ದ ಶ್ರೀಕೃಷ್ಣ ದೇವರ ಪುಟ್ಟ ವಿಗ್ರಹ ಇರೋದನ್ನು ಗಮನಿಸದೆ ನುಂಗಿದ್ದಾರೆ. ನಂತರ ಅವರಿಗೆ ಗಂಟಲು ನೋವು ಮತ್ತು ಗಂಟಲು ಊತ ಉಂಟಾಗಿ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿದ್ದಾರೆ. ವೈದ್ಯರು ಎಕ್ಸ್​ರೇ ಮಾಡಿಸಲು ಸೂಚಿಸಿದ್ದಾರೆ. ಎಕ್ಸರೇ ರಿಪೋರ್ಟ್​ನಲ್ಲಿ ಆ ವ್ಯಕ್ತಿಯ ಗಂಟಲಲ್ಲಿ ಬಾಲಕೃಷ್ಣನ ವಿಗ್ರಹ ಇರುವುದು ಗೊತ್ತಾಗಿದೆ.

ಕೂಡಲೇ ಚಿಕಿತ್ಸೆ ಪಡೆಯಲು ಬೆಳಗಾವಿಯ ಕೆಎಲ್ಇಎಸ್ ಡಾ.ಪ್ರಭಾಕರ ಕೋರೆ ಆಸ್ಪತ್ರೆಗೆ ಅವರು ದಾಖಲಾಗಿದ್ದಾರೆ. ಕೃಷ್ಣನ ಮೂರ್ತಿಯ ಎಡಗಾಲು ವ್ಯಕ್ತಿಯ ಆಹಾರ ನಾಳದಲ್ಲಿ ಸಿಲುಕಿರುವುದನ್ನು ಎಂಡೋಸ್ಕೋಪಿ ಮುಖಾಂತರ ದೃಢಪಡಿಸಿಕೊಂಡು ಇಎನ್​ಟಿ ವಿಭಾಗದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಕೃಷ್ಣನ ವಿಗ್ರಹವನ್ನು ಹೊರ ತೆಗೆದಿದ್ದಾರೆ.

ಇಎನ್​ಟಿ ವಿಭಾಗದ ವೈದ್ಯರಾದ ಡಾ.ಪ್ರೀತಿ ಹಜಾರೆ, ಡಾ.ವಿನಿತಾ ಮೆಡಗುಡ್ಡಮಠ, ಅರವಳಿಕೆ ವೈದ್ಯ ಡಾ. ಚೈತನ್ಯ ಕಾಮತ್ ತಂಡವು ರೋಗಿಯ ಗಂಟಲಿನಲ್ಲಿದ್ದ ಕೃಷ್ಣನ ವಿಗ್ರಹವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net