ಗರ್ಭಪಾತವಾಗಿದ್ದೇ ತಪ್ಪೆಂದು ಹೆಂಡತಿಯನ್ನು ಕೊಂದ ಗಂಡ! ಕುಟುಂಬವನ್ನೇ ಬಂಧಿಸಿದ ಪೊಲೀಸರು

17MKL1-Web
ಕೊಲೆಗೀಡಾದ ಶ್ರೀದೇವಿ ತಮದಡ್ಡಿ.
Published on

ಮೇಖಳಿ: ಸಮೀಪದ ನಿಲಜಿ ಗ್ರಾಮದಲ್ಲಿ ಪತ್ನಿಯನ್ನು ಕೊಲೆಗೈದಿದ್ದ ಪತಿ ಹಾಗೂ ಕುಟುಂಬಸ್ಥರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ. ಬೀರಪ್ಪ ಮಾರುತಿ ತಮದಡ್ಡಿ, ಮಾರುತಿ ತಮದಡ್ಡಿ, ರುಕ್ಮವ್ವ ತಮದಡ್ಡಿ, ಕಸ್ತೂರಿ ತಮದಡ್ಡಿ ಬಂಧಿತರು.

5 ವರ್ಷಗಳ ಹಿಂದೆ ಮೇಖಳಿ ಗ್ರಾಮದ ಶಿವಪ್ಪ ಬಟನೂರೆ ಎಂಬುವರ ಪುತ್ರಿ ಶ್ರೀದೇವಿಯನ್ನು ನಿಲಜಿ ಗ್ರಾಮದ ಭೀರಪ್ಪ ಮಾರುತಿ ತಮದಡ್ಡಿ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಜನಿಸಿದ್ದ ಗಂಡು ಮಗು ಕೆಲ ತಿಂಗಳ ನಂತರ ಮೃತಪಟ್ಟಿತ್ತು. ನಾಲ್ಕು ತಿಂಗಳ ನಂತರ ಮತ್ತೆ ಗರ್ಭಿಣಿಯಾಗಿದ್ದ ಶ್ರೀದೇವಿಗೆ ಗರ್ಭಪಾತವಾಗಿತ್ತು. ಇದೇ ವಿಷಯವಾಗಿ ಬೀರಪ್ಪ ಸಾರಾಯಿ ಕುಡಿದು ಬಂದು ಶ್ರೀದೇವಿಯನ್ನು ಪೀಡಿಸುತ್ತಿದ್ದ. ಪತಿ ಕುಟುಂಬಸ್ಥರೂ ಜಗಳ ಮಾಡಿ ಶ್ರೀದೇವಿಯನ್ನು ತವರಿಗೆ ಕಳುಹಿಸಿದ್ದರು. ಹಿರಿಯರ ಸಮ್ಮುಖದಲ್ಲಿ ಸಂಧಾನ ಮಾಡಿ ಶ್ರೀದೇವಿಯನ್ನು ಮತ್ತೆ ಗಂಡನ ಮನೆಗೆ ಕಳುಹಿಸಲಾಗಿತ್ತು. ಮೇ 4 ರಂದು ಶ್ರೀದೇವಿಯ ತಂದೆಗೆ ಕರೆ ಮಾಡಿದ್ದ ಬೀರಪ್ಪ, ನಿಮ್ಮ ಮಗಳು ಮೂರ್ಛೆ ರೋಗ ಬಂದು ತೀರಿಕೊಂಡಿದ್ದಾಳೆ ಎಂದು ಹೇಳಿದ್ದ. ನಿಲಜಿಗೆ ಧಾವಿಸಿದ ಶ್ರೀದೇವಿ ಸಂಬಂಧಿಕರು ಸಂಶಯ ಬಂದು ಕುಡಚಿ ಠಾಣೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಪಿಎಸ್‌ಐ ಶಿವರಾಜ ಧರಿಗೋಣ ನೇತೃತ್ವದ ತಂಡ ತನಿಖೆ ಕೈಗೊಂಡಾಗ, ಆಕೆಗೆ ಮಾನಸಿಕ, ದೈಹಿಕ ಹಿಂಸೆ ನೀಡಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net