

ತುಮಕೂರು: ಇಲ್ಲೊಬ್ಬ ಮಹಿಳೆ ಹಾಡುಹಗಲೇ ತನ್ನ ಗಂಡನ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಕೊಂದು ಶವವನ್ನ ಚರಂಡಿಯಲ್ಲೇ ಬಿಟ್ಟಿದ್ದಾಳೆ.
ಇಂತಹ ಕ್ರೂರ ಘಟನೆ ತುಮಕೂರು ನಗರದ ಬಡ್ಡಿಹಳ್ಳಿಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದೆ. ನಾರಾಯಣ (52) ಮೃತ ದುರ್ದೈವಿ. ಇವನ ಪತ್ನಿ ಅನ್ನಪೂರ್ಣ ಕೊಲೆ ಆರೋಪಿ. ಗಂಡನಿಗೆ ಅನ್ನಪೂರ್ಣ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದಾಗ ತಪ್ಪಿಸಿಕೊಳ್ಳಲು ಮನೆಯಿಂದ ಹೊರಗಡೆ ಬಂದ ನಾರಾಯಣಪ್ಪ ಚರಂಡಿಗೆ ಬಿದ್ದ. ಅಲ್ಲೇ ಇದ್ದ ರಾಮಕೃಷ್ಣ ಎಂಬಾತ ಆತನ ತಲೆ ಮೇಲೆ ಕಲ್ಲು ಎತ್ತು ಹಾಕಿದ್ದಾನೆ. ಸ್ಥಳದಲ್ಲೇ ನಾರಾಯಣಪ್ಪ ಪ್ರಾಣಬಿಟ್ಟಿದ್ದು, ಶವ ಚರಂಡಿಯಲ್ಲೇ ಇತ್ತು.
ನಾರಾಯಣಪ್ಪ ನೆಲಮಂಗಲ ಬಳಿಯ ಕಿಂಗ್ಫಿಷರ್ ಕಾರ್ಖಾನೆಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ. ಭಾನುವಾರ ಬಡ್ಡಿಹಳ್ಳಿಯ ಮನೆಯಲ್ಲಿ ನಾರಾಯಣಪ್ಪ ಹಾಗೂ ಪತಿ ಅನ್ನಪೂರ್ಣ ಜಗಳ ಆಡುತ್ತಿದ್ದು, ಗಂಡ-ಹೆಂಡತಿ ಜಗಳ ಅತಿರೇಕಕ್ಕೆ ಹೋಗಿದೆ. ಪತಿಯ ಮೇಲೆ ಅನ್ನಪೂರ್ಣ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾಳೆ. ಇದರಿಂದ ತಪ್ಪಿಸಿಕೊಳ್ಳಲು ಮನೆಯಿಂದ ಹೊರಬಂದ ನಾರಾಯಣಪ್ಪ ಮನೆ ಮುಂದಿನ ಚರಂಡಿಗೆ ಬಿದ್ದಿದ್ದಾನೆ. ಈ ವೇಳೆ ಮನೆಯಲ್ಲೇ ಇದ್ದ ರಾಮಕೃಷ್ಣ ಎಂಬಾತ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ನಾರಾಯಣಪ್ಪನ ತಲೆಮೇಲೆ ಕಲ್ಲು ಎತ್ತುಹಾಕಿದ್ದಾನೆ. ತೀವ್ರ ರಕ್ತಸ್ತ್ರಾವದಿಂದ ನಾರಾಯಣಪ್ಪ ಕೊನೆಯುಸಿರೆಳದಿದ್ದಾನೆ.
ಪತ್ನಿ ಅನೈತಿಕ ಸಂಬಂಧ ಹೊಂದಿದ್ದು ಗಂಡ-ಹೆಂಡತಿ ನಡುವಿನ ಜಗಳಕ್ಕೆ ಕಾರಣ ಎನ್ನಲಾಗಿದೆ. ಕೊಲೆಯಾದ ನಾರಾಯಣಪ್ಪಗೆ ಮೂವರು ಮಕ್ಕಳಿದ್ದಾರೆ. ಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿಗಳಾದ ಅನ್ನಪೂರ್ಣ ಹಾಗೂ ರಾಮಕೃಷ್ಣನನ್ನು ವಶಕ್ಕೆ ಪಡೆದಿದ್ದಾರೆ. ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.