ವಿದ್ಯುತ್ ಕಂಬಗಳ ಸಮೇತ ರಸ್ತೆಗೆ ಉರುಳಿದ ಬೃಹತ್ ಮರ

27blrp2
Published on

ಬೇಲೂರು: ಸೋಮವಾರ ಸಂಜೆ ಗಾಳಿ, ಮಳೆಗೆ ತಾಲೂಕಿನ ನಾರ್ವೆ ಗ್ರಾಮದ ಸಮೀಪ ಬೃಹತ್ ಗಾತ್ರದ ಮರವೊಂದು ಬುಡ ಸಮೇತ ಎರಡು ವಿದ್ಯುತ್ ಕಂಬದೊಂದಿಗೆ ರಸ್ತೆಗೆ ಉರುಳಿ ಬಿದ್ದಿದೆ. ವಾಹನಗಳ ಸವಾರರು, ವಿದ್ಯಾರ್ಥಿಗಳು, ಸಾರ್ವಜನಿಕರು ಮನೆಗೆ ತೆರಳಲು ಪರದಾಡಿದರು.


ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಭಾಗದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲ ದಿನಗಳ ಹಿಂದೆ ಸಮೀಪದ ಅಬ್ಬಿಹಳ್ಳ ತುಂಬಿ ಸೇತುವೆ ಮೇಲೆ ಎರಡ್ಮೂರು ದಿನಗಳ ಕಾಲ ಹರಿದಿದ್ದಲ್ಲದೆ, ಮರ, ಗಿಡಗಳು ರಸ್ತೆಗುರುಳಿ ಸಂಚಾರಕ್ಕೆ ತೊಡಕುಂಟಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಮಳೆ ಅಷ್ಟೇನೂ ತೊಂದರೆ ಕೊಡದಿದ್ದರೂ ಮಳೆ ನೀರಿಗೆ ನೆನೆದ ಮರಗಳು ಬುಡ ಸಮೇತ ವಿದ್ಯುತ್ ಕಂಬಗಳೊಂದಿಗೆ ನೆಲಕ್ಕುರುಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.


ಸೋಮವಾರ ಸಂಜೆ ನಾರ್ವೆ ಗ್ರಾಮದ ಸಮೀಪದ ರಸ್ತೆ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಮರ ಎರಡು ವಿದ್ಯುತ್ ಕಂಬಗಳ ಸಮೇತ ನೆಲಕ್ಕುರುಳಿದೆ. ಸಂಜೆ ಸಮಯದಲ್ಲಿ ಕೆಲಸ ಕಾರ್ಯಗಳನ್ನು ಮುಗಿಸಿದ ಸಾರ್ವಜನಿಕರು, ಶಾಲಾ ಕಾಲೇಜುಗಳಿಂದ ಆಗಮಿಸುವ ವಿದ್ಯಾರ್ಥಿಗಳು ಮತ್ತು ವಾಹನಗಳ ಸಾವಾರರು ಓಡಾಡುತ್ತಲೇ ಇರುತ್ತಾರೆ. ಆದರೆ ಅದೃಷ್ಟವಶಾತ್ ಈ ಮರ ವಿದ್ಯುತ್ ಕಂಬದ ಸಮೇತ ಬೀಳುವ ಸಂದರ್ಭ ಯಾರೂ ಬಾರದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.


ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸಾರ್ವಜನಿಕರ ಸಹಕಾರದೊಂದಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ರಸ್ತೆಗೆ ಬಿದ್ದಿದ್ದ ಮರ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net