

ವಿರಾಜಪೇಟೆ: ಒಂದನೇ ರುದ್ರಗುಪ್ಪೆ ಗ್ರಾಮದ ಕಾಫಿ ತೋಟಗಳಲ್ಲಿ ಒಂಟಿ ಸಲಗವೊಂದು ದಾಂಧಲೆ ನಡೆಸಿದ್ದರಿಂದ ಅಪಾರ ಪ್ರಮಾಣದಲ್ಲಿ ಕೃಷಿ ಫಸಲು ಹಾನಿಯಾಗಿದೆ.
ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ರುದ್ರಗುಪ್ಪೆ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವೊಂದು ದಾಂಧಲೆ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ಫಸಲನ್ನು ಹಾಳು ಮಾಡಿದೆ.
ಗ್ರಾಮದ ನಿವಾಸಿಗಳಾದ ಎ.ಎಚ್.ಸರಸ್ವತಿ ಮತ್ತು ಟೋನಿ ಎಂಬುವರಿಗೆ ಸೇರಿದ ಕಾಫಿ ತೋಟಗಳಲ್ಲಿ ಒಂಟಿ ಸಲಗವೊಂದು ನಿರಂತರವಾಗಿ ದಾಂಧಲೆ ನಡೆಸುತ್ತಿದ್ದು ಕಾಫಿ ಗಿಡಗಳು ಸೇರಿದಂತೆ ತೆಂಗು, ಅಡಕೆ ಮತ್ತು ಬಾಳೆ ಗಿಡಗಳನ್ನು ಧ್ವಂಸ ಮಾಡಿದೆ. ಅಲ್ಲದೆ ವಿದ್ಯುತ್ ಪರಿವರ್ತಕದಿಂದ ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಯನ್ನು ತುಂಡರಿಸಿದೆ. ಪರಿಣಾಮ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಅಲ್ಲದೆ ವಿದ್ಯುತ್ ಪೂರೈಕೆಯಾಗುತ್ತಿರುವ ತಂತಿಯು ನೆಲದಲ್ಲಿ ಬಿದ್ದಿರುವ ಕಾರಣ ಕಾರ್ಮಿಕರು ಮತ್ತು ಇತರರು ಈ ಭಾಗದಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಫಿ ಬೆಳೆಗಾರರಾದ ಎ.ಎಚ್.ಸರಸ್ವತಿ ಮಾಹಿತಿ ನೀಡಿದರು.
ಒಂದನೇ ರುದ್ರಗುಪ್ಪೆ ಮತ್ತು ಈ ಭಾಗದ ಇತರ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ಈ ಹಿಂದೆ ಮಾಡಿದ್ದರೂ ಕಾಡಾನೆಗಳು ನಿರಂತರವಾಗಿ ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ಬೆಳೆಗಳನ್ನು ಹಾನಿ ಮಾಡುತ್ತಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆಯು ಮತ್ತೆ ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗೆ ಅಟ್ಟುವಂತೆ ಆಗ್ರಹಿಸಿದ್ದಾರೆ.