16ರಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಬೃಹತ್ ಉದ್ಯೋಗ ಮೇಳ

ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆ
ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆ
Published on

ಪ್ರಮುಖ ಮುಖ್ಯಾಂಶಗಳು

  • ವಾಣಿಜ್ಯ, ಕಲೆ, ಮ್ಯಾನೇಜ್‌ಮೆಂಟ್ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ
ಮಂಗಳೂರು: ಕರಾವಳಿಯ ಯುವ ಸಮುದಾಯಕ್ಕೆ ಉದ್ಯೋಗಾವಕಾಶಗಳ ಹೆಬ್ಬಾಗಿಲನ್ನು ತೆರೆಯುವ ನಿಟ್ಟಿನಲ್ಲಿ, ಮಂಗಳೂರಿನ ಗಾಂಧಿನಗರದಲ್ಲಿರುವ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (KCCI) ಮಂಗಳೂರು ಇದರ ಸಹಯೋಗದೊಂದಿಗೆ ಜು. 16ರಂದು ಕಾಲೇಜು ಆವರಣದಲ್ಲಿ ಮೆಗಾ ಉದ್ಯೋಗ ಮೇಳ "ಸಮೃದ್ಧಿ ಕೆರಿಯರ್ ನೆಕ್ಸ್ಟ್-2026" ಹಮ್ಮಿಕೊಳ್ಳಲಾಗಿದೆ ಎಂದು ನ್ಯಾಯವಾದಿ, ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಯ ಸಂಚಾಲಕ ವಸಂತ ಕಾರಂದೂರು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ನಡೆಯಲಿರುವ ಈ ಉದ್ಯೋಗ ಮೇಳವು ಉದ್ಯೋಗಾಕಾಂಕ್ಷಿಗಳಿಗೆ ಕಾರ್ಪೊರೇಟ್ ಜಗತ್ತಿಗೆ ನೇರ ಪ್ರವೇಶ ಕಲ್ಪಿಸಲು ವೇದಿಕೆಯಾಗಲಿದೆ. ದೇಶದ ಪ್ರಮುಖ 25ರಿಂದ 30 ಪ್ರತಿಷ್ಠಿತ ಕಂಪನಿಗಳು ಈ ಮೇಳದಲ್ಲಿ ಪಾಲ್ಗೊಳ್ಳುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಸ್ಥಳದಲ್ಲೇ ಆಯ್ಕೆ ಮಾಡಿಕೊಳ್ಳಲಿವೆ. ಐಟಿಐ, ಡಿಪ್ಲೊಮಾ, ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ.
ವಿಶೇಷವಾಗಿ ವಾಣಿಜ್ಯ, ಕಲೆ ಹಾಗೂ ಮ್ಯಾನೇಜ್‌ಮೆಂಟ್ ವಿಭಾಗದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ನೂರಾರು ಉದ್ಯೋಗಾವಕಾಶಗಳು ಕಾಯುತ್ತಿವೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಸುತ್ತಮುತ್ತಲಿನ ಕರಾವಳಿ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳು ಈ ಮೇಳದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಉದ್ಯೋಗ ಮೇಳಕ್ಕೆ ಯಾವುದೇ ರೀತಿಯ ನೊಂದಣಿ ಶುಲ್ಕ ಇರುವುದಿಲ್ಲ. ಎಲ್ಲಾ ವಿಭಾಗದ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತವಾಗಿದೆ ಎಂದರು.
ಆಸಕ್ತ ಅಭ್ಯರ್ಥಿಗಳು ಕಾಲೇಜು ಒದಗಿಸಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಕ್ಷಣವೇ ತಮ್ಮ ಹೆಸರನ್ನು ಆನ್‌ಲೈನ್‌ನಲ್ಲಿ ನೊಂದಾಯಿಸಿಕೊಳ್ಳಬಹುದು. ಸಂದರ್ಶನಕ್ಕೆ ಬರುವ ಉದ್ಯೋಗಾಕಾಂಕ್ಷಿಗಳು ತಮ್ಮ ಅಪ್‌ಡೇಟೆಡ್ ರೆಸ್ಯೂಮ್ ಹಾಗೂ ಅಗತ್ಯ ಶೈಕ್ಷಣಿಕ ದಾಖಲಾತಿಗಳ ಪ್ರತಿಗಳೊಂದಿಗೆ ಹಾಜರಾಗಿ ಈ ಬೃಹತ್ ಮೇಳದ ಸದುಪಯೋಗ ಪಡೆದುಕೊಳ್ಳಬೇಕಾಗಿ ಕಾಲೇಜಿನ ಪ್ರಾಂಶುಪಾಲರು ತಿಳಿಸಿದರು.
ಶ್ರೀ ಗೋಕರ್ಣನಾಥ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ನಾಗೇಶ್ ಕರ್ಕೇರ, ಪ್ರಾಂಶುಪಾಲ ಡಾ. ಜಯಪ್ರಕಾಶ್, ಮಿಥುನ್‌ಚಂದ್ರ ಅವರು ಸುದ್ದಿಗೋಷ್ಠಿಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net