

ವಿರಾಜಪೇಟೆ: ಪೂರ್ವ ಮುಂಗಾರು ಪರಿಣಾಮ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದ ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿರಾಜಪೇಟೆ ಹೊರವಲಯ ಮಗ್ಗುಲ ಗ್ರಾಮದಲ್ಲಿ ಶುಕ್ರವಾರ ಶ್ರೀ ಶನೈಶ್ಚರಸ್ವಾಮಿ ದೇಗುಲದ ಮಣ್ಣು ಕುಸಿದು ಬೃಹತ್ ಕಾಂಕ್ರೀಟ್ ತಡೆಗೊಡೆ ವಿದ್ಯುತ್ ಕಂಬಕ್ಕೆ ಒರಗಿ ನಿಂತಿದೆ.
2024ರಲ್ಲಿ ದೇವಾಲಯದ ಆಡಳಿತ ಮಂಡಳಿ 5 ಲಕ್ಷ ರೂ.ವೆಚ್ಚದಲ್ಲಿ ಬೃಹತ್ ಕಾಂಕ್ರೀಟ್ ತಡೆಗೊಡೆಯನ್ನು ನಿರ್ಮಾಣ ಮಾಡಿತ್ತು. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನೀರು ಸಂಗ್ರಹವಾಗಿ ಶುಕ್ರವಾರ ಮಣ್ಣು ಕುಸಿದು ತಡೆಗೋಡೆ ವಿದ್ಯುತ್ ಕಂಬಕ್ಕೆ ಒರಗಿ ನಿಂತಿದೆ.
ಗೋಡೆಯ ಅವಶೇಷಗಳು ಗ್ರಾಮಕ್ಕೆ ತೆರಳುವ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ದೇಗುಲದ ಆಡಳಿತ ಮಂಡಳಿ ರಸ್ತೆಯಲ್ಲಿದ್ದ ಅವಶೇಷಗಳನ್ನು ಜೆ.ಸಿ.ಬಿ. ಯಂತ್ರದ ಸಹಾಯದಿಂದ ತೆರವುಗೊಳಿಸಿತು.
ದೇವಾಲಯದ ಅಧ್ಯಕ್ಷ ಚೋಕಂಡ ರಮೇಶ್ ಮಂದಣ್ಣ ಪತ್ರಿಕೆಯೊಂದಿಗೆ ಮಾತನಾಡಿ, ಮಳೆಯಿಂದ ದೇವಾಲಯದ ತಡೆಗೋಡೆಗೆ ಹಾನಿಯಾಗಿದೆ. ಇದರಿಂದ ದೇವಾಲಯಕ್ಕೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಸರ್ಕಾರ ಮಳೆ ಹಾನಿ ಪರಿಹಾರ ಯೋಜನೆಯಡಿ ಪರಿಹಾರ ದೊರಕಿಸಿಕೊಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ವಿರಾಜಪೇಟೆ ನಗರ ಪುರಸಭೆ ಮುಖ್ಯಾಧಿಕಾರಿ ನಾಚಪ್ಪ, ಅಧ್ಯಕ್ಷೆ ದೇಚಮ್ಮ ಕಾಳಪ್ಪ, ಸದಸ್ಯ ಡಿ.ಪಿ. ರಾಜೇಶ್ ಪದ್ಮನಾಭ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.