

ಮುಂಡರಗಿ: ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಐತಿಹಾಸಿಕ ಕೋಟೆ ಸಂಪೂರ್ಣ ಶಿಥಿಲಾವಸ್ಥೆ ಗೊಂಡಿದ್ದು, ಅದನ್ನು ದುರಸ್ತಿಗೊಳಿಸಿ ಸಂರಕ್ಷಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.
ಹಮ್ಮಿಗಿ ದೇಸಾಯಿಯಾಗಿದ್ದ ಕೆಂಚನಗೌಡ ದೇಸಾಯಿ ಅವರು ನಿರ್ಮಿಸಿದ್ದ ಕೋಟೆ ಈಗ ಸಂಪೂರ್ಣ ಹಾಳಾಗಿದೆ. ಕಣ್ಮನ ಸೆಳೆಯುವ ಕೋಟೆಯ ಬೃಹತ್ ಗೋಡೆ, ಕಾವಲು ಗೋಪುರ ಎಲ್ಲವೂ ನಿರ್ವಹಣೆ ಇಲ್ಲದೆ ಹಾಳಾಗುತ್ತಿದೆ. ಹಮ್ಮಿಗಿ ಕೆಂಚನಗೌಡರು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಧುಮುಕಿದ್ದರು. ಕೆಂಚನಗೌಡರು ಮತ್ತು ಮುಂಡರಗಿಯ ಭೀಮರಾಯರು 1858ರಲ್ಲಿ ಬ್ರಿಟಿಷರ ವಿರುದ್ಧ ಕೊಪ್ಪಳ ಕೋಟೆಯಲ್ಲಿ ನಡೆದ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ್ದಾರೆ. 1858ರ ಬಂಡಾಯದ ಸಂದರ್ಭದಲ್ಲಿ ಕೆಂಚನಗೌಡರು ಹಮ್ಮಿಗಿಯ ಕೋಟೆಯಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದರು ಎನ್ನಲಾಗಿದೆ.
ಕೋಟೆ ಸದ್ಯ ಹಾಳಾಗಿದೆ. ಪ್ರವೇಶ ದ್ವಾರದಲ್ಲಿ ಎತ್ತರವಾದ ಹುಡೆ ಇದೆ. ದಕ್ಷಿಣಕ್ಕೆ ಮುಖ ಮಾಡಿ ಮತ್ತೊಂದು ಭವ್ಯವಾದ ಅತ್ಯಂತ ಎತ್ತರದ ದ್ವಾರವಿದೆ. ಈ ಕೋಟೆಯಲ್ಲಿ ಸುಮಾರು 11 ಹುಡೆಗಳಿದ್ದವು. ಈ ಪೈಕಿ ಸದ್ಯ ನಾಲ್ಕು ಹುಡೆಗಳು ಕಾಣಸಿಗುತ್ತವೆ. ಅವು ಕೂಡ ಶಿಥಿಲಗೊಂಡಿವೆ. ಪರಂಪರೆಯನ್ನು ಸಾರುವ ಕೋಟೆ ಈಗ ಬಹಿರ್ದೆಸೆಯ ತಾಣವಾಗಿದೆ. ಕಾವಲು ಗೋಪುರ ನಾಶವಾಗಿವೆ. ಕೋಟೆಯ ಮಹಾದ್ವಾರ ಈಗಲೂ ಗಟ್ಟಿಯಾಗಿದ್ದು, ಇನ್ನುಳಿದಂತೆ ಎಲ್ಲ ಅವಶೇಷಗಳು ಸಂಪೂರ್ಣ ಅವನತಿಯ ಹಾದಿ ಹಿಡಿದಿವೆ.
ಕೋಟೆ ಸುತ್ತಲೂ ಜಾಲಿಗಿಡಗಳು ಬೆಳೆದಿದ್ದು, ಮಲಿನತೆಯಿಂದ ಕೂಡಿದೆ. ಅಳಿದುಳಿದ ಕೋಟೆಯನ್ನು ಸಂರಕ್ಷಿಸುವ ಅಗತ್ಯವಿದೆ ಎನ್ನುತ್ತಾರೆ ಇತಿಹಾಸಪ್ರಿಯರು. ಕೆಂಚನಗೌಡರ ವಂಶಸ್ಥರಲ್ಲಿ ಕೆಲವರು ಗ್ರಾಮದಲ್ಲಿದ್ದರೆ ಮತ್ತೆ ಕೆಲವರು ಬೇರೆ ಪಟ್ಟಣಗಳಲ್ಲಿ ನೆಲೆಸಿದ್ದಾರೆ. ಕೆಂಚನಗೌಡರ ಆಸ್ತಿಗಳಿಗೆ ಸಂಬಂಧಿಸಿರುವವರು ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಹಮ್ಮಿಗಿ ಕೋಟೆಯು ಪ್ರಾಚ್ಯವಸ್ತು ಇಲಾಖೆಯ ಸಂರಕ್ಷಿತ ಸ್ಮಾರಕ ಪಟ್ಟಿಯಲ್ಲಿ ಇಲ್ಲ. ಹೀಗಾಗಿ ರಕ್ಷಣೆಗೆ ಆದ್ಯತೆ ನೀಡಲಾಗಿಲ್ಲ. ಕೋಟೆ ಇತಿಹಾಸ, ಹಿನ್ನೆಲೆ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.-ರಾಜಾರಾಮ ಬಿ.ಸಿ, ಪ್ರಾಚ್ಯವಸ್ತು ಇಲಾಖೆ ಅಧಿಕಾರಿ ಗದಗ