

ಹುಬ್ಬಳ್ಳಿ: ತಾರಿಹಾಳ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿದೆ. ಇನ್ನೂ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿರುವರಿಗೆ ಚಿಕಿತ್ಸೆ ಮುಂದುವರಿದಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಬಿಡ್ನಾಳ ನಿವಾಸಿ ಮಲ್ಲಿಕ್‌ರೆಹಾನ್ ಬಾವರಸಾಬ ಕೊಪ್ಪದ(19) ಮೃತಪಟ್ಟಿದ್ದಾರೆ. ಹುಬ್ಬಳ್ಳಿ ಹೊರವಲಯದ ತಾರಿಹಾಳ ಕೈಗಾರಿಕೆ ವಸಾಹತು ಪ್ರದೇಶದಲ್ಲಿ ಜು.23ರಂದು ಐ.ಸಿ.ಫ್ಲೇಮ್ ಸ್ಫಾರ್ಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 8 ಮಂದಿ ಗಂಭೀರ ಗಾಯಗೊಂಡಿದ್ದರು. ಇವರಲ್ಲಿ ಮೂವರು ಕಾಮಿರ್ಕರು ಮರುದಿನ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. ಇದೀಗ ಮತ್ತೊಬ್ಬ ಮೃತಪಟ್ಟಿದ್ದು, ಸಾವಿನ ಸಂಖ್ಯೆ 4ಕ್ಕೆ ಏರಿದೆ. ಉಳಿದ ನಾಲ್ವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ತಿಳಿಸಿದಿದ್ದಾರೆ. ವಿಜಯಲಕ್ಷ್ಮೀ ಯಚ್ಚನಾಗರ, ಗೌರವ್ವ ಹಿರೇಮಠ, ಮಾಳೇಶ ಹದ್ದನ್ನವರ ಮತ್ತು ಮಲ್ಲಿಕ್‌ರೆಹಾನ್ ಬಾವರಸಾಬ ಕೊಪ್ಪದ ಮೃತರು.
15- 20 ದಿನಗಳ ಹಿಂದೆ ಅನಧಿಕೃತವಾಗಿ ಪ್ರಾರಂಭವಾಗಿದ್ದ ಐ.ಸಿ.ಫ್ಲೇಮ್ ಸ್ಫಾರ್ಕಲ್ ಫ್ಯಾಕ್ಟರಿಯಲ್ಲಿ 11 ಕಾಮಿರ್ಕರು ಕೆಲಸ ಮಾಡುತ್ತಿದ್ದರು. ಬೆಳಗ್ಗೆ ಪಾಳಿಯಲ್ಲಿ 8, ರಾತ್ರಿ ಪಾಳಿಯಲ್ಲಿ ಮೂವರು ಕೆಲಸ ಮಾಡುತ್ತಿದ್ದರು. ಅಗ್ನಿ ದುರಂತ ನಡೆದ ಸ್ಥಳದಲ್ಲಿ ಅಪಾಯಕಾರಿ ಬ್ಯುಟೆನಾಲ್ ರಾಸಾಯನಿಕ ಹೆಸರಿದ್ದ ಬ್ಯಾರೆಲ್ ದೊರೆತಿದೆ. ಇದರ ಜತೆಗೆ ವ್ಯಾಕ್ಸ್, ಐಟಿಎ ರಾಸಾಯನಿಕಗಳೂ ಇದ್ದವು ಎಂಬ ಶಂಕೆ ವ್ಯಕ್ತವಾಗಿದೆ.
ಇಂತಹ ಅಪಾಯಕಾರಿ ರಾಸಾಯನಿಕಗಳನ್ನು ಯಾವುದೇ ಮುಂಜಾಗ್ರತಾ, ಸುರಕ್ಷತಾ ಕ್ರಮ ಅನುಸರಿಸದೆ ಫ್ಯಾಕ್ಟರಿಯಲ್ಲಿ ಸಂಗ್ರಹಿಸಿ ಇರಿಸಲಾಗಿತ್ತು. ಕೆಲಸಗಾರರಿಗೆ ಕೇವಲ ಕ್ಯಾಂಡಲ್ ತಯಾರಿಸುವ ಕೆಲಸ ಎಂದು ಹೇಳಿಕೊಂಡು ಸ್ಫಾರ್ಕಲ್ ಕ್ಯಾಂಡಲ್ ತಯಾರಿಸುತ್ತಿದ್ದರು. ಇದೇ ಕಾರಣಕ್ಕೆ ಫ್ಯಾಕ್ಟರಿಯಲ್ಲಿದ್ದ ರಾಸಾಯನಿಕ ವಸ್ತುಗಳು ಸ್ಫೋಟಗೊಂಡಿವೆ ಎಂದು ಪ್ರಾಥಮಿಕ ವಿಚಾರಣೆಯಲ್ಲಿ ತಿಳಿದು ಬಂದಿದೆ. ಸ್ಫೋಟಕಗಳಿದ್ದರೂ ಕಿಟಕಿ, ಬಾಗಿಲು ಮುಚ್ಚಿ ಕದ್ದು ಮುಚ್ಚಿ ಸ್ಫಾರ್ಕಲ್ ಕ್ಯಾಂಡಲ್ ತಯಾರಿಸುತ್ತಿದ್ದರು ಎಂಬ ಭಯಾನಕ ಅಂಶ ಬೆಳಕಿಗೆ ಬಂದಿದೆ.