ಅನೈತಿಕ ಚಟುವಟಿಕೆ ತಾಣವಾದ ಭವನ

samudaya bhavana
Published on

ಜಿ.ನಾಗರಾಜ್​, ಬೂದಿಕೋಟೆ

ಮದುವೆ ಸೇರಿ ಇತರೆ ಶುಭ ಸಮಾರಂಭಗಳಿಗೆ ಅನುಕೂಲವಾಗಲೆಂದು ತೊಪ್ಪನಹಳ್ಳಿಯಲ್ಲಿ ಪ್ರದೇಶಾಭಿವೃದ್ಧಿ ಯೋಜನೆಯಡಿ ನಿರ್ಮಿಸಲಾಗುತ್ತಿದ್ದ ಸಮುದಾಯ ಭವನ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಕಟ್ಟಡವು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಬಂಗಾರಪೇಟೆ ತಾಲೂಕಿನ ತೊಪ್ಪನಹಳ್ಳಿ ಗಡಿಭಾಗಕ್ಕೆ ಹೊಂದಿಕೊಂಡಿರುವ ಪಂಚಾಯಿತಿ ಕೇಂದ್ರ ಸ್ಥಾನವಾಗಿದ್ದು, ಪಂಚಾಯಿತಿ ವ್ಯಾಪ್ತಿ ಸೇರಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಶುಭ ಸಮಾರಂಭಗಳನ್ನು ನಡೆಸಲು ಯಾವುದೇ ಕಲ್ಯಾಣ ಮಂಟಪ ಅಥವಾ ಸುಸಜ್ಜಿತ ಸಮುದಾಯ ಭವನವಿಲ್ಲ.

ಗಡಿ ಭಾಗದ ಗ್ರಾಮಗಳಲ್ಲಿ ಮದುವೆ ಯಂತಹ ಶುಭ ಸಮಾರಂಭ ಮಾಡಬೇಕಾದರೆ ಗ್ರಾಮದ ದೇವಾಲಯ ಅಥವಾ ಮನೆಯ ಮುಂದೆ ಮಾಡಬೇಕಾಗಿದೆ. ದೇವಾಲಯ ಅಥವಾ ಮನೆ ಮುಂದೆ ಶುಭ ಸಮಾರಂಭ ಮಾಡಲು ಹಲವು ಸಮಸ್ಯೆಗಳು ಎದುರಾಗುವ ಕಾರಣ ಹಣವುಳ್ಳ ಕೆಲವರು ದೂರದ ಕಾಮಸಮುದ್ರ ಅಥವಾ ಬಂಗಾರಪೇಟೆಯ ಕಲ್ಯಾಣ ಮಂಟಪಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಇದೆ.

ಬಡ ಜನರು ಹೆಚ್ಚು ಹಣ ಒಟ್ಟು ಕಲ್ಯಾಣ ಮಂಟಪಗಳಿಗೆ ಹೋಗುವುದಕ್ಕೆ ಸಾಧ್ಯವಾಗದೆ ದೇವಾಲಯದ ಮುಂದೆ ಶುಭ ಕಾರ್ಯ ಮಾಡಿಕೊಳುತ್ತಿದ್ದರು. ದೇವಾಲಯಗಳ ಬಳಿ ನೀರು, ಶೌಚಗೃಹ ಸೇರಿ ಮೂಲ ಸೌಕರ್ಯಗಳ ಸಮಸ್ಯೆ ಜತೆಗೆ ಮಳೆ ಬಂದರೆ ಶುಭ ಕಾರ್ಯಕ್ಕೆ ಬಂದವರು ಆಶ್ರಯ ಪಡೆಯಲು ಸಮಸ್ಯೆ ಎದುರಾಗುತ್ತಿತ್ತು. ಇದನ್ನು ಮನಗೊಂಡಂತಹ ಶಾಸಕ ಎಸ್​.ಎನ್​ ನಾರಾಯಣಸ್ವಾಮಿ ಈ ಹಿಂದೆಯೇ ಶುಭ ಸಮಾರಂಭಗಳಿಗೆ ಅನುಕೂಲ ಆಗಲೆಂದು ಶ್ರೀ ಚಂದ್ರಮೌಳೇಶ್ವರ ದೇವಾಲಯಕ್ಕೆ ಸಮುದಾಯ ಭವನ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿ, ಅದರಂತೆ ಅನುದಾನವನ್ನೂ ಬಿಡುಗಡೆ ಮಾಡಿದ್ದರು.

ಭವನ ನಿಮಾರ್ಣದ ಕಾಮಗಾರಿ ಪೂರ್ಣಗೊಂಡರೆ ಸುತ್ತಮುತ್ತಲಿನ ಗ್ರಾಮಸ್ಥರು ಶುಭ ಸಮಾರಂಭ ಮಾಡಲು ಅನುಕೂಲವಾಗಲಿದೆ. ಕಟ್ಟಡ ಪೂರ್ಣಗೊಳಿಸಿದೇ ಮೂಲೆಗುಂಪು ಮಾಡಿರುವುದರಿಂದ ಸರ್ಕಾರದ ಹಣ ಪೋಲಾಗುತ್ತಿದೆ. ಆದ್ದರಿಂದ ಸರ್ಕಾರದ ಅನುದಾನ ಪಡೆದು ಭವನದ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

17 ಲಕ್ಷ ರೂ.ಬಿಡುಗಡೆ

2021&-22ನೇ ಸಾಲಿನ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಸಮುದಾಯ ಭವನ ನಿರ್ಮಿಸಲು ಅನುದಾನ ಮಂಜೂರು ಮಾಡಿಸಿ, ಕಟ್ಟಡ ನಿಮಾರ್ಣದ ಕಾಮಗಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿತ್ತು. ಮೊದಲ ಹಂತವಾಗಿ 17 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಆ ಅನುದಾನದಲ್ಲಿ ದೇವಾಲಯ ಪಕ್ಕದಲ್ಲಿ 70 ಅಗಲ& 40 ಉದ್ದ ಅಳತೆಯಲ್ಲಿ ಸಮುದಾಯ ಭವನ ಕಾಮಗಾರಿ ಆರಂಭವಾಗಿ ಮೋಲ್ಡ್​ ಹಂತದಲ್ಲಿ ನಿಂತಿದೆ. ಕಟ್ಟಡದ ಒಳಗೆ ಅಡುಗೆ ಕೋಣೆ, ಕೊಠಡಿ ಮತ್ತು ಹಾಲ್​ ವಿಂಗಡಣೆ ಮಾಡಲಾಗಿದೆ. ಆದರೆ, ಅನುದಾನದ ಕೊರತೆಯಿಂದ ಮೋಲ್ಡ್​ ಹಾಕಿ ಕಾಮಗಾರಿ ಮುಂದುವರಿಸದೇ ಕಳೆದ 3 ವರ್ಷಗಳಿಂದ ಹಾಗೇ ಬಿಟ್ಟಿರುವುದರಿಂದ ಕಟ್ಟಡ ಮಧ್ಯಪಾನ ಸೇರಿ ಇತರೆ ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

"ಗಡಿ ಗ್ರಾಮಗಳ ಜನರ ಅನುಕೂಲಕ್ಕಾಗಿ ಲಕ್ಷಾಂತರ ವೆಚ್ಚದಲ್ಲಿ ಸಮುದಾಯ ಭವನದ ಕಾಮಗಾರಿ ಆರಂಭಿಸಿ ಅನುದಾನದ ಕೊರತೆ ಎದುರಾಗಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಭವನದ ಕಾಮಗಾರಿ ಅರ್ಧಕ್ಕೆ ನಿಂತಿರುವುದರಿಂದ ಶಾಸಕರ ಹಾಗೂ ಸಾರ್ವಜನಿಕರ ಕನಸು ಸಾಕಾರಗೊಂಡಿಲ್ಲ. ಸರ್ಕಾರ ಮುಂದಿನ ಹಂತದ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿ ಗಡಿ ಭಾಗದ ಜನರ ಕನಸನ್ನು ನನಸು ಮಾಡಬೇಕು."

- ನಾರಾಯಣಪ್ಪ ತೊಪ್ಪನಹಳ್ಳಿ ಗ್ರಾಮಸ್ಥ

"ಸಾರ್ವಜನಿಕರ ಮನವಿಗೆ ಸ್ಪಂದಿಸಿ ಶಾಸಕ ಎಸ್​.ಎನ್​. ನಾರಾಯಣಸ್ವಾಮಿ ಮೂರು ವರ್ಷಗಳ ಹಿಂದೆ ಶ್ರೀ ಚಂದ್ರಮೌಳೇಶ್ವರ ದೇವಾಲಯಕ್ಕೆ ಸಮುದಾಯ ಭವನ ನಿರ್ಮಿಸಲು ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಭವನಕ್ಕೆ ಮೋಲ್ಡ್​ ಹಾಕಲಾಗಿದ್ದು, ಅನುದಾನ ಬಿಡುಗಡೆ ವಿಳಂಭವಾದ್ದರಿಂದ ಕಾಮಗಾರಿ ಸ್ಥಗಿತಗೊಂಡಿದೆ. ಆದಷ್ಟು ಬೇಗ ಅನುದಾನ ಪಡೆದು ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ."

- ಪ್ರಭಾಕರ್​ರೆಡ್ಡಿ

ಗ್ರಾಪಂ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net