

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ ಬಹು ಮುಖ್ಯವಾದ ಘಟ್ಟ. ಇಂದಿನ ಮಕ್ಕಳು ಅದರಿಂದ ವಂಚಿತರಾಗುತ್ತಿದ್ದಾರೆ ಎಂದು ಕವಯಿತ್ರಿ ಸವಿತಾ ನಾಗಭೂಷಣ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮಕ್ಕಳ ಕವಿ ರಾಜಶೇಖರ ಕುಕ್ಕುಂದಾ ಅವರ "ಬಿಸಿ ಬಿಸಿ ಬಾತು' ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಕ್ಕಳನ್ನು ಆಟಕ್ಕೆ ಬಿಡದೆ ಪಠ್ಯವನ್ನು ಓದಿಸುವ ಈ ಕಾಲದ ಪರಿ ಅವರನ್ನು ಯಂತ್ರಮಾನವರನ್ನಾಗಿಸುತ್ತಿದೆ. ನಮಗೆ ಬಾಲ್ಯದಲ್ಲಿ ಇಂತಹ ಕಠೋರ ನಿರ್ಬಂಧಗಳಿರಲಿಲ್ಲ. ಹಕ್ಕಿ ಗೂಡಿನಲ್ಲಿ ತತ್ತಿ, ಕೆರೆ ದಂಡೆಯಲಿ ಹಾರುವ ಕಪ್ಪೆ, ಹರಿದಾಡವ ಹಾವನ್ನು ಕಾಣುತ್ತಿದ್ದೆವು. ಇಂದಿನ ಮಕ್ಕಳಿಗೆ ಇಂತಹ ಅವಕಾಶಗಳೇ ಇಲ್ಲ ಎಂದರು.
ಮಗುತನವನ್ನು ಇನ್ನೂ ಹಾಗೆ ಉಳಿಸಿಕೊಂಡು ಬಂದ ರಾಜಶೇಖರ ಕುಕ್ಕುಂದಾ ಕವಿತೆಗಳು ನಮ್ಮ ಬಾಲ್ಯದ ದಿನಗಳನ್ನು ನೆನಪಿಸುತ್ತವೆ. ಕವಿತೆಯ ಆಶಯ ಮನೋರಂಜನೆ ಮಾತ್ರ ಆಗದೇ, ಅದರಿಂದ ಸಂದೇಶ ರವಾನೆಯಾಗಲಿ ಎಂದರು.
ಜಿ. ಬಿ. ಹೊಂಬಳ ಪ್ರಶಸ್ತಿಗೆ ಭಾಜನರಾದ ಕವಿ ರಾಜಶೇಖರ ಕುಕ್ಕುಂದಾ ಮಾತನಾಡಿ, ಪ್ರತಿ ವರ್ಷ ತಮ್ಮ ಜನ್ಮದಿನದಂದು ಒಂದು ಕೃತಿ ಜನ್ಮ ತಾಳುವಂತೆ ಮಾಡುವ ಹೊಸ ಸಂಪ್ರದಾಯ ಹುಟ್ಟು ಹಾಕಿದ ನಿವೃತ್ತ ಗ್ರಂಥಪಾಲಕ ಜಿ.ಬಿ.ಹೊಂಬಳ ಕಾರ್ಯ ಶ್ಲಾಘನೀಯ ಎಂದರು.
ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ಮಕ್ಕಳ ಸಾಹಿತ್ಯವನ್ನು ಜನಪ್ರಿಯಗೊಳಿಸುವತ್ತ ಆದ್ಯತೆ ನೀಡಬೇಕು. ಪ್ರಕಟಿತ ಪುಸ್ತಕಗಳು ಮಕ್ಕಳಿಗೆ ದೊರೆಯುವಂತಾಗಬೇಕು ಎಂದರು.
ಡಾ. ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿಗಳಾದ ಡಾ. ಮಾಲತಿ ಪಟ್ಟಣಶೆಟ್ಟಿ, ಶ್ಯಾಮಸುಂದರ ಬಿದರಕುಂದಿ, ಡಾ. ಸಿ.ಯು. ಬೆಳ್ಳಕ್ಕಿ, ಡಾ. ಬಸು ಬೇವಿನಗಿಡದ, ರಾಜಕುಮಾರ ಕುಲಕರ್ಣಿ, ಅನಿಲ ಗುನ್ನಾಪುರ, ಪ್ರಕಾಶ ಕಡಮೆ, ನಿರ್ಮಲಾ ಶೆಟ್ಟರ್, ಶ್ರೀಧರ ಗಸ್ತಿ, ವಿ.ಎಸ್. ಶಿರೋಳ, ಎಸ್.ಕೆ. ಸವಣೂರು, ಶಿವು ಬಿದರಕಟ್ಟಿ, ಇತರರು ಇದ್ದರು.
ಡಾ. ಆನಂದ ಪಾಟೀಲ ನಿರೂಪಿಸಿದರು.