

ತೂಬಗೆರೆ: ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಭಕ್ತಸಾಗರವೇ ಹರಿದು ಬಂದಿತ್ತು. ಕಾರು, ಬೈಕುಗಳಲ್ಲಿ ತಂಡೋಪತಂಡವಾಗಿ ಬಂದ ಭಕ್ತರು ದೇವರ ದರ್ಶನಕ್ಕೆ ಮುಗಿಬಿದ್ದರು. ಶ್ರೀ ಕ್ಷೇತ್ರದ ತುಂಬ ಭಕ್ತರ ಸಂಚಾರ ಕರೊನಾ ಕಹಿನೆನಪನ್ನು ಮರೆಸುವಂತೆ ಭಾಸವಾಗುತ್ತಿತ್ತು.
ಸುದೀರ್ಘ ಲಾಕ್‌ಡೌನ್ ಹಾಗೂ ಜಿಲ್ಲೆಯಲ್ಲಿ ವಾರದ ಲಾಕ್‌ಡೌನ್ ತೆರವು ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಇಷ್ಟೊಂದು ಭಕ್ತರು ಜಮಾಯಿಸಿದ್ದರು. ಈ ಬಾರಿಯ ನಾಗರ ಪಂಚಮಿಯಂದು ಕರೊನಾ ಆತಂಕದಿಂದ ಬೆರಳೆಣಿಕೆಯಷ್ಟು ಭಕ್ತರು ಕಂಡುಬಂದಿದ್ದರು. ಆದರೆ ಮಂಗಳವಾರ ಸಾವಿರಾರು ಭಕ್ತರು ಕ್ಷೇತ್ರದಲ್ಲಿ ಜಮಾವಣೆಯಾಗಿದ್ದು ವಿಶೇಷವಾಗಿತ್ತು. ಪ್ರತಿ ಭಾನುವಾರ ಕ್ಷೇತ್ರದಲ್ಲಿ ಭಕ್ತರ ದಂಡು ಹರಿದು ಬರುತ್ತಿತ್ತು. ಆದರೆ ಕರೊನಾ ಕಾರಣದಿಂದ ಮಂಕು ಕವಿದಿದ್ದ ವಾತಾವರಣ ಪ್ರಸ್ತುತ ತಿಳಿಯಾಗುತ್ತಿದೆ. ನಿಧಾನವಾಗಿ ಭಕ್ತರು ಶ್ರೀ ಕ್ಷೇತ್ರದ ಕಡೆ ಮುಖ ಮಾಡುತ್ತಿದ್ದಾರೆ.
ಚುರುಕುಗೊಂಡ ವ್ಯಾಪಾರ: ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದ ಆವರಣದಲ್ಲಿ ತಲಮಾರುಗಳಿಂದ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುತ್ತಿರುವ ನೂರಾರು ಕುಟುಂಬಗಳಿವೆ. ಸುದೀರ್ಘ ಲಾಕ್‌ಡೌನ್‌ನಿಂದಾಗಿ ಇವೆಲ್ಲ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದವು. ಈಗ ವ್ಯಾಪಾರಸ್ಥ ಕುಟುಂಬಗಳು ಮರಳಿ ಹಳಿಗೆ ಬರುತ್ತಿವೆ. ವ್ಯಾಪಾರ ವಹಿವಾಟು ಆರಂಭವಾಗಿರುವುದು ಆಶಾದಾಯಕ ಬೆಳವಣಿಗೆ.
ದರ್ಶನಕ್ಕೆ ಮಾತ್ರ ಅವಕಾಶ: ಕರೊನಾ ಕಾರಣದಿಂದ ಜಿಲ್ಲಾಡಳಿತದ ಆದೇಶದಂತೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ. ವಿಶೇಷ ಪೂಜೆ, ತೀರ್ಥ ಪ್ರಸಾದ ವಿತರಣೆಗೆ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದೆ. ಭಕ್ತರು ಸಾಲಿನಲ್ಲಿ ಸಾಗಿ ದೇವರ ದರ್ಶನ ಪಡೆದು ಮಂಗಳಾರತಿ ಸ್ವಿಕರಿಸಿದರು.
ನಾಗರಕಲ್ಲಿಗೆ ವಿಶೇಷ ಪೂಜೆ: ಶ್ರೀ ಘಾಟಿ ಕ್ಷೇತ್ರದ ಪ್ರಸಿದ್ಧ ನಾಗರಕಟ್ಟೆಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ನಾಗರಕಲ್ಲಿಗೆ ಹಾಲೆರೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ಹಿರಿಯರು ಮಕ್ಕಳಿಗೆ ನಿರ್ಬಂಧ: ದೇವರ ದರ್ಶನಕ್ಕೆ ಭಕ್ತರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದ್ದರೂ ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ದೇಗುಲದ ಪ್ರವೇಶ ದ್ವಾರದಲ್ಲೇ ಥರ್ಮಲ್ ಸ್ಕ್ರೀನಿಂಗ್ ಮೂಲಕ ಭಕ್ತರನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ದೇಗುಲದ ಪ್ರಾಂಗಣ ಪ್ರವೇಶಕ್ಕೆ ಮೊದಲೇ ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.
ನಾಲ್ಕು ತಿಂಗಳಿಂದ ಪುಣ್ಯ ಕ್ಷೇತ್ರಕ್ಕೆ ಬೇಟಿ ನೀಡಿರಲಿಲ್ಲ. ಮೊದಲ ಬಾರಿಗೆ ಕುಟುಂಬ ಸದಸ್ಯರೊಂದಿಗೆ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿದ್ದೇವೆ. ದೇವರ ದರ್ಶನ ಪಡೆದು ಮನಸ್ಸಿಗೆ ನೆಮ್ಮದಿ ಸಿಕ್ಕಿದೆ. ರವಿಕುಮಾರ್ ಯಲಹಂಕ ನಿವಾಸಿ ವಾರದಿಂದೀಚಿಗೆ ವ್ಯಾಪಾರ ಸುಧಾರಿಸಿದೆ. ತಾತನ ಕಾಲದಿಂದಲೂ ಇಲ್ಲಿಯೇ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದೆವೆ. ಕರೊನಾ ಲಾಕ್‌ಡೌನ್ ತೆರವು ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಭಕ್ತರು ಆಗಮಿಸಿದ್ದಾರೆ. ಚಂದ್ರು ವ್ಯಾಪಾರಿ