

ರಾಮನಗರ: ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿಗೆ ಸಂಬಂಧಿಸಿದಂತೆ ಹಿಂಡೀಕರಣವಾಗಿರುವ ಮಾಹಿತಿಗಳನ್ನು ರದ್ದುಪಡಿಸಬೇಕು. ರೈತರಿಗೆ ರಾಜ್ಯ ಮತ್ತು ಜಿಲ್ಲೆಯಲ್ಲಿ ಯಾವುದೇ ನೋಟಿಸ್ ನೀಡಬಾರದೆಂದು ರೈತ ಸಂಘದ ಆಗ್ರಹವಾಗಿದೆ ಎಂದು ರೈತ ಸಂಘ ಹಿರಿಯ ಉಪಾಧ್ಯಕ್ಷ ಕೆ. ಮಲ್ಲಯ್ಯ ತಿಳಿಸಿದರು.
ರಾಮನಗರದ ಎಪಿಎಂಸಿ ಆವರಣದ ರೈತ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ರೈತರ ಜಮೀನು ವಕ್ಫ್ ಬೋರ್ಡಿಗೆ ವರ್ಗಾವಣೆ ಮಾಡುತ್ತಿರುವ ಸರ್ಕಾರದ ಕ್ರಮವನ್ನು ರಾಜ್ಯ ರೈತ ಸಂಘ ಬಲವಾಗಿ ಖಂಡಿಸುತ್ತದೆ. ರಾಜ್ಯ ಸರ್ಕಾರ ಒಂದು ಧರ್ಮದ ಓಲೈಕೆಗೆ ರೈತರ ಜಮೀನುಗಳನ್ನು ಕಸಿದುಕೊಂಡು ವಕ್ಫ್ ಬೋರ್ಡಿಗೆ ವರ್ಗಾವಣೆ ಮಾಡುತ್ತಿರುವ ಸರ್ಕಾರದ ನಡವಳಿಕೆ ಸರಿಯಿಲ್ಲ. ಸರ್ಕಾರದ ಇಂತಹ ರೈತ ವಿರೋಧಿ ನಡವಳಿಕೆಯನ್ನು ರೈತ ಸಂಘ ವಿರೋಧಿಸುತ್ತದೆ. ಈಗಾಗಲೇ ರಾಜ್ಯದಲ್ಲಿ ರೈತರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಆದರೂ ರಾಜ್ಯ ಸರ್ಕಾರ ಜಾಣ ಮೌನ ವಹಿಸಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಮಾರಕ ಕೃಷಿಕಾಯ್ದೆಗಳ ವಾಪಸಾತಿ, ಮೇಕೆದಾಟು ಯೋಜನೆ ಅನುಷ್ಠಾನ, ನೀರಾವರಿ, ವಿದ್ಯುತ್, ಆಡಳಿತ ಸುಧಾರಣೆ, ಭ್ರಷ್ಟಾಚಾರ ನಿಗ್ರಹ ರೈತ ಕಲ್ಯಾಣ ಮುಂತಾದ ಭರವಸೆ ಈಡೇರಿಸುವ ವಾಗ್ದಾನ ನೀಡಿ ಅಧಿಕಾರಕ್ಕೇರಿದ ಸರ್ಕಾರ ಅನೇಕ ಭ್ರಷ್ಟಾಚಾರಗಳಲ್ಲಿ ಭಾಗಿಯಾಗಿ ಜನರ ಭಾವನೆ ಬೇರೆಡೆ ಸೆಳೆಯಲು ವಕ್ಫ್ ಅಭಿಯಾನ ಅಸ್ತ್ರ ಬಳಸಿ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದೆ ಎಂದು ಕಿಡಿಕಾರಿದರು.
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ತಿಮ್ಮೇಗೌಡ ಮಾತನಾಡಿ, ರಾಮನಗರ ಜಿಲ್ಲಾಧಿಕಾರಿ ಸರ್ವಾಧಿಕಾರಿಯಾಗಿದ್ದಾರೆ. ಜಿಲ್ಲೆಯಲ್ಲಿ ಕಂದಾಯ, ಕೃಷಿ, ಅರಣ್ಯ, ನೋಂದಣಿ, ಜಿಲ್ಲಾ ಪಂಚಾಯಿತಿಗೆ ಸೇರಿದ ರೈತರ ಸಮಸ್ಯೆ ಸಾಕಷ್ಟಿವೆ. ಆದರೆ ಆ ಸಮಸ್ಯೆ ಹೇಳಿಕೊಳ್ಳಲು ರೈತಪರ ಹೋರಾಟ ಮಾಡದಂತೆ ಜಿಲ್ಲಾಧಿಕಾರಿ ಪ್ರವೇಶಿಸದಂತೆ 144 ಕಾಯ್ದೆ ಜಾರಿ ಮಾಡಿ ಜನರ ಹಕ್ಕನ್ನು ಕಸಿದಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಜಿಲ್ಲಾಧಿಕಾರಿ ಹೊರಡಿಸಿರುವ ನಿಷೇಧಾಜ್ಞೆ ಕಾಲಮಿತಿ ಬಿಕೆಎಸ್ ಕಾಯ್ದೆ 163/4 ರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಭರವಸೆ ಭರವಸೆಯಾಗಿಯೇ ಉಳಿದಿದೆ. ಸರ್ಕಾರ ವಕ್ಫ್ ಅಭಿಯಾನಕ್ಕೆ ತಡೆ ಜತೆಗೆ ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂಧಿಸದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದರು.
ರಾಜ್ಯ ಸಮಿತಿ ಸದಸ್ಯರಾದ ಕೆ.ಎಸ್. ರಾಜು, ಎಚ್.ಸಿ. ಕೃಷ್ಣಯ್ಯ, ಜಿಲ್ಲಾ ಕಾರ್ಯದರ್ಶಿ ಎಂ. ಪುಟ್ಟಸ್ವಾಮಿ, ರಾಮನಗರ ತಾಲೂಕು ಅಧ್ಯಕ್ಷ ನಾಗರಾಜು, ಮಾಗಡಿ ತಾಲೂಕು ಅಧ್ಯಕ್ಷ ಲೋಕೇಶ್, ಮುಖಂಡರಾದ ಢನಾಯ್ಕನಪುರ ಶಿವಲಿಂಗಯ್ಯ, ಎಂ.ಸಿ. ವಿಶ್ವನಾಥ್, ಮುನಿರಾಜು, ಬೋರೇಗೌಡ, ವರದರಾಜು ಮುಂತಾದವರಿದ್ದರು.
"ರಾಜ್ಯ ಸರ್ಕಾರ ಹೈಕಮಾಂಡ್ ಹೇಳಿದಂತೆ ಆಡಳಿತ ನಡೆಸುತ್ತಿದೆ. ಬಡ ರೈತರ ಆಸ್ತಿ ಉಳಿಸಲು ಸರ್ಕಾರದಿಂದ ಆಗುತ್ತಿಲ್ಲ. ರಾಜ್ಯದ ರೈತರನ್ನು ಬಲಿಪಶು ಮಾಡುತ್ತಿದೆ. ಸರ್ಕಾರಕ್ಕೆ ರೈತರ ಇಚ್ಚಾಶಕ್ತಿ ಇಲ್ಲ. ರೈತ ವಿರೋಧಿ ನಡೆ ಅನುಸರಿಸುತ್ತಿದೆ. ನಾವುಗಳು ಎಂದೂ ಸರ್ಕಾರದ ಇಂತಹ ನಿಲುವನ್ನು ಸಹಿಸುವುದಿಲ್ಲ."
ರಾಮೇಗೌಡ, ಚನ್ನಪಟ್ಟಣ ತಾಲೂಕು ಅಧ್ಯಕ್ಷ, ರೈತ ಸಂಘ
"ವಕ್ಫ್ ಅಭಿಯಾನ ರೈತ ಕುಲ ನಾಶ ಮಾಡುವ ಹುನ್ನಾರ. ಸರ್ಕಾರ ರೈತರಿಗೆ ಭಯ ಹುಟ್ಟಿಸಬಾರದು. ರೈತರಿಗೆ ಅನ್ಯಾಯವಾಗಬಾರದು, ರಾಜ್ಯ ಮತ್ತು ಜಿಲ್ಲೆಯಲ್ಲಿ ಕಾಲಮಿತಿಯೊಳಗೆ ಪಹಣಿಯಲ್ಲಿ ಕೂರಿಸಿರುವ ವಕ್ಫ್ ಹುತಾರು ತೆಗೆದು ಹಾಕಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ರೈತರು ಉಗ್ರ ಚಳವಳಿ ನಡೆಸಬೇಕಾಗುತ್ತದೆ."
ಕೆ. ಮಲ್ಲಯ್ಯ, ರಾಜ್ಯ ಹಿರಿಯ ಉಪಾಧ್ಯಕ್ಷರು, ರೈತ ಸಂಘ.