

ಗುರುಪುರ(ದ.ಕ.): ಮಂಗಳೂರು ಹೊರವಲಯದ ದರ್ಗಾದಲ್ಲಿ ಹಿಂದು ದೇವಸ್ಥಾನ ಹೋಲುವ ಮಾದರಿ ಪತ್ತೆಯಾಗಿದೆ. ಗಂಜೀಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಳಲಿ ಪೇಟೆಯಲ್ಲಿರುವ ಜುಮಾ ಮಸೀದಿ ಕಟ್ಟಡಕ್ಕೆ ಹೊಂದಿಕೊಂಡ ಅಸ್ಸಯ್ಯಿದ್ ಅಬ್ದುಲ್ಲಾಹಿಲ್ ಮದನಿ(ಐ.ಸಿ) ದರ್ಗಾ ಶರೀಫ್ನಲ್ಲಿ ದೇವಳ ಮಾದರಿ ಪತ್ತೆಯಾಗಿದೆ. ಮಸೀದಿ ಮತ್ತು ದರ್ಗಾವನ್ನು ಹೊಸದಾಗಿ ನಿರ್ಮಿಸುವ ಉದ್ದೇಶದಿಂದ ಕೆಲ ದಿನಗಳ ಹಿಂದೆ ಹಳೆಯ ದರ್ಗಾವನ್ನು ಕೆಡವಿದಾಗ ದೇಗುಲ ಮಾದರಿ ರಚನೆ ಕಂಡುಬಂದಿದೆ. ಒಳಗಡೆ ಗುಡಿ ಕಂಡು ಬಂದಿದ್ದು, ಅದನ್ನು ಕೆಡವದೆ ಹಾಗೆಯೇ ಬಿಡಲಾಗಿದೆ. ಗುಡಿಯ ಕಲಶ, ತೋಮರ, ಕಂಬಗಳಿಗೆ ಯಾವುದೇ ಹಾನಿಯಾಗಿಲ್ಲ. ಬಜ್ಪೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಗುಡಿ ಇರುವ ಮಾಹಿತಿ: ಸುತ್ತಲೂ ಎತ್ತರದ ಆವರಣ ಗೋಡೆ ಇರುವುದರಿಂದ ಹೊರಗೆ ಮಸೀದಿ ಮತ್ತು ದರ್ಗಾ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಇದರಿಂದಾಗಿ ಮಸೀದಿ ಕಟ್ಟಡಕ್ಕೆ ಹೊಂದಿಕೊಂಡಿದ್ದ ದೇವಸ್ಥಾನ ರೂಪದ ರಚನೆ ಇಷ್ಟರವರೆಗೆ ಬೆಳಕಿಗೆ ಬಂದಿರಲಿಲ್ಲ. ಮಸೀದಿಗೆ ಹೊಂದಿಕೊಂಡು ಗುಡಿ ಇರುವುದು ಸ್ಥಳೀಯ ಕೆಲವರಿಗೆ ಗೊತ್ತಿದ್ದರೂ, ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಬಹಿರಂಗ ಪಡಿಸಿರಲಿಲ್ಲ. ಈಗ ಮಸೀದಿ ಪಕ್ಕ ಗುಡಿಯ ರಚನೆ ಇರುವುದನ್ನು ಮುಸ್ಲಿಂ ಸಮುದಾಯವೇ ಬಹಿರಂಗಪಡಿಸಿದೆ.
ಕಾಮಗಾರಿ ಸ್ಥಗಿತಕ್ಕೆ ಆದೇಶ: ಮಳಲಿ ಮಸೀದಿ ನವೀಕರಣ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ. ಮಸೀದಿ ಬಳಿ ಪತ್ತೆಯಾಗಿರುವ ರಚನೆ ಮೇಲ್ನೋಟಕ್ಕೆ ಹಿಂದು ದೇಗುಲವನ್ನು ಹೋಲುತ್ತಿದೆ. ಆದರೆ ಮಸೀದಿ ಆಡಳಿತ ಮಂಡಳಿಯವರು 600 ವರ್ಷಗಳ ಹಿಂದಿನ ಮಸೀದಿಗಳಲ್ಲಿ ಇಂತಹ ರಚನೆ ಸಾಮಾನ್ಯ ಎಂದು ತಿಳಿಸಿದ್ದಾರೆ. ಈ ಬಗ್ಗೆ ಸಮಗ್ರ ಅಧ್ಯಯನಕ್ಕೆ ಪ್ರಾಚ್ಯವಸ್ತು ಹಾಗೂ ಭೂ ಕಂದಾಯ ಇಲಾಖೆಗೆ ಸೂಚಿಸಲಾಗುವುದು. ಇವೆರಡು ಇಲಾಖೆಗಳ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಹಳೇ ಕಟ್ಟಡಗಳಲ್ಲಿ ಸಾಮಾನ್ಯ: ಮಸೀದಿ ಆವರಣದಲ್ಲಿ ದೇವಸ್ಥಾನ ಮಾದರಿ ರಚನೆ ಗೊಂದಲ ಈಗಾಗಲೇ ನಿವಾರಣೆ ಆಗಿದೆ. ಹಳೇ ಮಸೀದಿಗಳಲ್ಲಿ ಇಂತಹ ವಿನ್ಯಾಸವುಳ್ಳ ಕಟ್ಟಡ ಸಾಮಾನ್ಯ. ದರ್ಗಾ ನವೀಕರಣ ಸಲುವಾಗಿ ಹಳೇ ಕಟ್ಟಡವನ್ನು ನೆಲಸಮಗೊಳಿಸಲಾಗಿದ್ದು, ಈ ಸಂದರ್ಭ ದೇಗುಲ ಮಾದರಿ ರಚನೆ ಬೆಳಕಿಗೆ ಬಂದಿದೆ. ಇದು ಮಸೀದಿಗೆ ಸಂಬಂಧಪಟ್ಟ ರಚನೆಯೇ ಆಗಿದ್ದು, ತಹಸೀಲ್ದಾರ್ ಪುರಂದರ ಹೆಗ್ಡೆ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಇದನ್ನು ದೃಢಪಡಿಸಿದ್ದಾರೆ ಎಂದು ಮಸೀದಿ ಆಡಳಿತ ಮಂಡಳಿ ಅಧ್ಯಕ್ಷ ಮೊಹಮ್ಮದ್ ಮೋನು ತಿಳಿಸಿದ್ದಾರೆ.
ಜಾಗ ಯಾರಿಗೆ ಸೇರಿದೆ ಎಂಬುದನ್ನು ಜಿಲ್ಲಾಡಳಿತ ಭೂ ದಾಖಲೆಗಳನ್ನು ಪರಿಶೀಲಿಸಲಿದೆ. ಈ ಸಂಬಂಧ ಎಂಡೋಮೆಂಟ್ ಮತ್ತು ವಕ್ಫ್ ಬೋರ್ಡ್ನಿಂದ ವರದಿ ಪಡೆಯಲಾಗುವುದು. ಸತ್ಯಾಸತ್ಯತೆ ಪತ್ತೆ ಮಾಡಿ ಶೀಘ್ರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಸಾರ್ವಜನಿಕರು ಗೊಂದಲಗಳಿಗೆ ಅವಕಾಶ ಮಾಡಿ ಕೊಡಬಾರದು. ಶಾಂತಿ, ಸೌಹಾರ್ದತೆಯಿಂದ ವರ್ತಿಸಿ, ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಬೇಕು.
| ಡಾ.ರಾಜೇಂದ್ರ ಕೆ.ವಿ. ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ
ಮಳಲಿಯಲ್ಲಿ ಮಸೀದಿ ತೆರವು ವೇಳೆ ದೇವಸ್ಥಾನ ಮಾದರಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಸ್ಥಳೀಯರ ಜತೆ ಮಾತುಕತೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಿ, ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದೇನೆ. ಸ್ಥಳದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
| ಎನ್.ಶಶಿಕುಮಾರ್ ಮಂಗಳೂರು ನಗರ ಪೊಲೀಸ್ ಆಯುಕ್ತ