

ಚಿತ್ರದುರ್ಗ: ಕವಾಡಿಗರಹಟ್ಟಿ ಹಾಗೂ ಅಡವಿ ರಾಮಜೋಗಿಹಳ್ಳಿ ಪ್ರಕರಣವನ್ನು ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ವಹಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಬುಧವಾರ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಒತ್ತಾಯಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ ಮಾತನಾಡಿ, ಕವಾಡಿಗರಹಟ್ಟಿ ದಲಿತ ಕಾಲನಿಯಲ್ಲಿ ಕಲುಷಿತ ನೀರು ಸೇವಿಸಿ ಐವರು ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದಿದ್ದಾರೆ. ಕಾಲರಾ ಎಂಬ ಕಾರಣ ನೀಡಿ ಮುಚ್ಚಿಹಾಕುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.
ಅಡವಿ ರಾಮಜೋಗಿಹಳ್ಳಿಯಲ್ಲಿ ಅಂಬೇಡ್ಕರ್ ನಾಮಫಲಕ ಅಳವಡಿಸುವ ವಿಚಾರ ದಲಿತರ ಮೇಲೆ ಹಲ್ಲೆ ನಡೆದಿದ್ದು, ಈ ಎರಡೂ ಪ್ರಕರಣ ಕುರಿತು ಕಾನೂನು ಕ್ರಮ ಕೈಗೊಳ್ಳದಿದ್ದರೆ, ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭೇಟಿ ನೀಡಿ ನೈಜ ಸ್ಥಿತಿ ಅರಿಯಬೇಕು. ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದರು.
ಶ್ರೀನಿವಾಸ್‌ಮೂರ್ತಿ, ಕರಿಬಸಪ್ಪ, ರಘುನಂದನ್, ಚಂದ್ರಮೂರ್ತಿ, ನವೀನ್ ಮದ್ದೇರು, ಪ್ರಭಾಕರ್, ಶ್ರೀನಿವಾಸ್, ಮಲ್ಲಿಕಾರ್ಜುನ್ ಇತರರಿದ್ದರು.