ಬದ್ಧತೆ, ತಾಳ್ಮೆಯ ವ್ಯಾಸಂಗದಿಂದ ಉನ್ನತ ಹುದ್ದೆ ಲಭ್ಯ

10 M.D.R.1
Published on

ಮದ್ದೂರು: ಬದ್ಧತೆ, ತಾಳ್ಮೆಯನ್ನು ಅಳವಡಿಸಿಕೊಂಡು ವ್ಯಾಸಂಗ ಮಾಡಿದರೆ ಉನ್ನತ ಹುದ್ದೆಗಳನ್ನು ಅಲಂಕರಿಸಬಹುದು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹಾಗೂ ಚಲನಚಿತ್ರ ನಿರ್ಮಾಪಕ ಟಿ.ಎಸ್.ನಾಗಾಭರಣ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ತಾಲೂಕಿನ ಬೆಸಗರಹಳ್ಳಿಯ ಮಾನಸ ಸಮೂಹ ಸಂಸ್ಥೆಗಳ ವತಿಯಿಂದ ಭಾನುವಾರ ಆಯೋಜಿಸಿದ್ದ ಮಾನಸೋತ್ಸವ-2020 ಡಿ.ಕರಡಿಗೌಡ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಡಿ.ಕರಡಿಗೌಡರ ಹೆಸರಿನಲ್ಲಿ ಕೊಡಮಾಡುವ ಕಲಾ ಕೌಸ್ತುಭ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಬೇರೆ ತಾಯಿ (ಆಂಗ್ಲಭಾಷೆ)ಯ ಮೇಲೆ ವ್ಯಾಮೋಹ ಬಿಟ್ಟು, ನಮ್ಮ ತಾಯಿ (ಕನ್ನಡ ಭಾಷೆ)ಯನ್ನು ಪ್ರೀತಿಸುವಂತೆ ಪಾಲಕರು ಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ನಾನೂ ಕನ್ನಡ ಭಾಷೆಯಲ್ಲೇ ಓದಿದವನು. ಮಾತೃಭಾಷೆಯಲ್ಲಿ ವ್ಯಾಸಂಗ ಮಾಡಿದ ಹಲವಾರು ವ್ಯಕ್ತಿಗಳು ಮಹಾನ್ ಸಾಧನೆ ಮಾಡಿ ವಿಶ್ವದ ಗಮನ ಸೆಳೆದ ನಿದರ್ಶಗಳು ನಮ್ಮ ಕಣ್ಮುಂದಿವೆ ಎಂದು ತಿಳಿಸಿದರು.

ಚಲನಚಿತ್ರ ನಿರ್ಮಾಪಕ ಟಿ.ಎಸ್.ನಾಗಾಭರಣ ಅವರಿಗೆ ಸ್ವಾತಂತ್ರ್ಯ ಹೋರಾಟಗಾರ ಡಿ.ಕರಡಿಗೌಡರ ಹೆಸರಿನಲ್ಲಿ ಕೊಡುವ ಕಲಾ ಕೌಸ್ತುಭ ರತ್ನ ಪ್ರಶಸ್ತಿಯನ್ನು ಹಾಗೂ ಖ್ಯಾತ ಅಂಕಣಕಾರ ಮತ್ತು ಸಂಸ್ಕೃತಿ ಚಿಂತಕ ಡಾ.ಗುಬ್ಬಿಗೂಡು ರಮೇಶ್ ಅವರಿಗೆ ಸಾಹಿತ್ಯ ಸೇವಾ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net