

ಲೋಕೇಶ್ ಎಂ. ಐಹೊಳೆ ಜಗಳೂರು
ಸದಾ ಸ್ವಚ್ಛತೆ, ನೈರ್ಮಲ್ಯದ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ತಾಪಂ ಅಧಿಕಾರಿಗಳ ಕಚೇರಿಯಲ್ಲಿಯೇ ಶೌಚಗೃಹವಿಲ್ಲ!.
ಹೌದು.. ನಿತ್ಯ ನೂರಾರು ಜನ ಬಂದು ಹೋಗುವ ಜಗಳೂರು ತಾಪಂ ಆವರಣದಲ್ಲಿ ಇಂದಿಗೂ ಶೌಚಗೃಹವಿಲ್ಲದೆ ಕಚೇರಿ ಕೆಲಸಗಳಿಗೆ ಬರುವವರಿಗೆ ಬಯಲು ಸ್ಥಳವೇ ಮೂತ್ರಸ್ಥಾನವಾಗಿದೆ.
ಕಳೆದ 14 ವರ್ಷಗಳ ಹಿಂದೆ ಲಕ್ಷಾಂತರ ರೂ. ಬಳಸಿ ನಿರ್ಮಿಸಿದ ಹೈಟೆಕ್ ಶೌಚಗೃಹ ಬಳಕೆಗೆ ಬಾರದೆ ಗಿಡಗಂಟಿ ಬೆಳೆದು ಕಣ್ಮರೆಯಾಗಿದೆ.
ತಾಪಂ ಆವರಣ ಸಂಪೂರ್ಣ ದುರ್ವಾಸನೆಯಿಂದ ಕೂಡಿದ್ದು, ಸಿಬ್ಬಂದಿಗೆ ಹಾಗೂ ಕಚೇರಿ ಕೆಲಸಗಳಿಗೆ ಬರುವವರಿಗೆ ಕಿರಿಕಿರಿಯಾಗಿದೆ.,
ತಾಪಂ ಕಚೇರಿಯಲ್ಲಿ ಅಕ್ಷರ ದಾಸೋಹ, ಕೈಗಾರಿಕಾ ಇಲಾಖೆ, ಮೀನುಗಾರಿಕೆ ಇಲಾಖೆ, ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯನಿರ್ವಹಿಸುತ್ತಿವೆ. ತಾಪಂಗೆ ನಿತ್ಯ 22 ಗ್ರಾಪಂ ವ್ಯಾಪ್ತಿಯ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಕಚೇರಿ ಕೆಲಸಕ್ಕೆ ಬಂದು ಹೋಗುತ್ತಾರೆ.
ಉದ್ಯೋಗ ಖಾತ್ರಿ, ಕುಡಿಯುವ ನೀರಿನ ಸಮಸ್ಯೆ, ಶೌಚಗೃಹ, ವಸತಿ ಸೌಲಭ್ಯಕ್ಕಾಗಿ ಗ್ರಾಮೀಣ ಭಾಗದ ಜನರು ಸಮಸ್ಯೆ ಹೊತ್ತು ಜನರ ಬರುತ್ತಾರೆ, ಅಲ್ಲದೇ ಬಿಸಿಯೂಟಕ್ಕೆ ಸಂಬಂಧಿಸಿದಂತೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಕೈಗಾರಿಕೆ ಇಲಾಖೆ ಸೌಲಭ್ಯ ಪಡೆಯಲು ದಿನನಿತ್ಯ ಕಚೇರಿಗೆ ಬರುತ್ತಾರೆ. ಆದರೆ, ಶೌಚಗೃಹವಿಲ್ಲದೆ ಮೂತ್ರ ವಿಸರ್ಜನೆ ಮಾಡಲು ಜನರ ಪರದಾಡುವಂತಾಗಿದೆ.
14 ವರ್ಷದಿಂದ ಉದ್ಘಾಟನೆಯಾಗಿಲ್ಲ: ತಾಪಂ ಆವರಣದ ಮೂಲೆಯಲ್ಲಿ ಪಪಂ ಎಸ್ಎಫ್ಸಿ ವಿಶೇಷ ಯೋಜನೆಯಡಿ 2010-11ನೇ ಸಾಲಿನಲ್ಲಿ 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್ ಶೌಚಗೃಹ 14 ವರ್ಷಗಳಾದರೂ ಉದ್ಘಾಟನೆಯಾಗಿಲ್ಲ. ಪ್ರತಿ ವರ್ಷ ಸುಣ್ಣಬಣ್ಣಕ್ಕೆ ಮಾತ್ರ ಹಣ ಖರ್ಚಾಗುತ್ತಿದೆ. ಆದರೆ, ಬಳಕೆ ಮಾತ್ರ ಆಗುತ್ತಿಲ್ಲ. ಸಾರ್ವಜನಿಕರ ಬಳಕೆಗೆ ಕಟ್ಟಿದ ಶೌಚಗೃಹ ಅಧಿಕಾರಿಗಳ ನಿರ್ಲಕ್ಷದಿಂದ ಮೂಲೆಗುಂಪಾಗಿದೆ.
ಈಗಾಗಲೇ ಮೀನುಗಾರಿಕೆ ಇಲಾಖೆಯವರು ಮೀನು ಸಾಕಲು ತೊಟ್ಟಿ ನಿರ್ಮಿಸಿ ಸುತ್ತಲು ತಂತಿ ಬೇಲಿ ಹಾಕಿದ್ದಾರೆ ಜತೆಗೆ ಕೃಷಿ ಇಲಾಖೆ ಯಂತ್ರೋಪಕರಣಗಳಿಗೆ ಶೆಡ್ ನಿರ್ಮಿಸಲಾಗಿದೆ. ಇದರಿಂದ ಹೈಟೆಕ್ ಶೌಚಗೃಹಕ್ಕೆ ದಾರಿಯೂ ಇಲ್ಲವಾಗಿ ಜನರಿಗೆ ಬಯಲೇ ಮೂತ್ರಾಲಯವಾಗಿದೆ.