

ರಬಕವಿ/ಬನಹಟ್ಟಿ: ಸಮಾನತೆಗಾಗಿ ಹೋರಾಡಿದ ನಾಯಕರಲ್ಲಿ ಜಗಜೀವನರಾಮ್ ಪ್ರಮುಖರು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಬಾಬು ಜಗಜೀವನರಾಮ್ ಜಯಂತಿಯಲ್ಲಿ ಮಾತನಾಡಿದ ಅವರು, ಸಮಾಜದ ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಜೀವನ ಪಡೆಯಬೇಕು ಎಂಬುದು ಅವರ ಕನಸಾಗಿತ್ತು. ಜಗಜೀವನರಾಮ್ ಮತ್ತು ಬಿ.ಆರ್. ಅಂಬೇಡ್ಕರ್ ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಶ್ರಮಿಸಿದರು ಎಂದರು.
ತಹಸೀಲ್ದಾರ್ ಗಿರೀಶ ಸ್ವಾದಿ ಮಾತನಾಡಿ, ಬಾಬು ಜಗಜೀವನರಾಮ್ ಚಿಕ್ಕ ವಯಸ್ಸಿನಲ್ಲಿಯೇ ತಂದೆ ಕಳೆದುಕೊಂಡು ತಾಯಿ ವಸಂತಿ ದೇವಿಯ ಆರೈಕೆಯಲ್ಲಿ ಬೆಳೆದರು. ಅಸ್ಪಶ್ಯತೆಯಿಂದ ಅವಮಾನಿತರಾದರೂ ಎದೆಗುಂದದೆ ಧೈರ್ಯದಿಂದ ಅವರು ತೀವ್ರವಾಗಿ ಪ್ರಭಾವಿತರಾಗಿದ್ದರು. ಶಾಲೆಯಲ್ಲಿಯೂ ಪ್ರತ್ಯೇಕ ಮಡಕೆಯಿಂದ ನೀರು ಕುಡಿಯಲು ಹೇೀಳಲಾಯಿತು. ಇದರಿಂದ ಕೋಪಗೊಂಡ ಅವರು ಮಡಕೆಗಳನ್ನು ಒಡೆದರು ಎಂದರು.
ಮಹಾತ್ಮ ಗಾಂಧಿಯವರು ಪ್ರಾರಂಭಿಸಿದ ಸ್ವಾತಂತ್ರ್ಯ ಹೋರಾಟ ಮತ್ತು ಅಸ್ಪಶ್ಯತೆಯ ವಿರುದ್ಧದ ಹೋರಾಟದಲ್ಲಿ ಭಾಗವಹಿಸಿದರು. ಸ್ವತಂತ್ರ ಭಾರತದ ಮೊದಲ ಕಾರ್ಮಿಕ ಸಚಿವರಾದರು. ತಮ್ಮ ರಾಜಕೀಯ ಪ್ರಯಾಣದಲ್ಲಿ ಎಂದಿಗೂ ಹಿಂತಿರುಗಿ ನೋಡಲಿಲ್ಲ. ಅತ್ಯುತ್ತಮ ಸಂಸದೀಯ ಪಟುವೂ ಆಗಿದ್ದರು ಎಂದರು.
ಬಾಬು ಮಹಾಜನ, ಚಂದ್ರು ಹರಿಜನ, ಶಾಂತಾ ಕೂಗಾಟೆ, ಮಂಜು ಆಲಗೂರ, ಪಿ.ಆರ್. ಮಠಪತಿ, ಸದಾಶಿವ ಕುಂಬಾರ, ಸುಭಾಸ ಪವಾರ ಇದ್ದರು.