ಮೈಸೂರಿನ ಪಾರಂಪರಿಕ ಹೆಗ್ಗುರುತು, ದೊಡ್ಡ ಗಡಿಯಾರಕ್ಕೆ ಕಾಯಕಲ್ಪ

DSC_6599
Published on

ಆರ್.ಕೃಷ್ಣ ಮೈಸೂರು
ಇನ್ನು ಮೂರು ವರ್ಷಗಳಲ್ಲಿ ಶತಮಾನೋತ್ಸವ ಕಾಣಲಿರುವ ಮೈಸೂರು ರಾಜ್ಯದ ಪಾರಂಪರಿಕ ಹೆಗ್ಗುರುತಿನಲ್ಲಿ ಒಂದಾದ ನಗರದ ದೊಡ್ಡ ಗಡಿಯಾರ ಗೋಪುರದ ಕಾಯಕಲ್ಪ ಕಾರ್ಯ ಆರಂಭಗೊಂಡಿದೆ.
ಮೈಸೂರು ಆಳ್ವಿಕೆಯಲ್ಲಿ ಸುವರ್ಣಯುಗ ಕಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪಟ್ಟಾಭಿಷೇಕದ ರಜತ ಮಹೋತ್ಸವ ಸವಿನೆನಪಿನಲ್ಲಿ ಪುರಭವನದ ಮುಂಭಾಗ ದೊಡ್ಡ ಗೋಪುರ ನಿರ್ಮಿಸಿ ಅದಕ್ಕೆ ಗಡಿಯಾರ ಅಳವಡಿಸಲಾಗಿತ್ತು. ಆದರೆ ಸೂಕ್ತ ನಿರ್ವಹಣೆ ಇಲ್ಲದೆ ಗಡಿಯಾರದ ಗೋಪುರ ವರ್ಷದಿಂದ ವರ್ಷಕ್ಕೆ ಶಿಥಿಲಗೊಳ್ಳುತ್ತಲೇ ಇತ್ತು.
ಸುಮಾರು ಒಂದು ಕಿ.ಮೀ.ವರೆವಿಗೂ ಕೇಳಿ ಬರುತ್ತಿದ್ದ ದೊಡ್ಡ ಗಡಿಯಾದ ಘಂಟೆ ನಾದ ಗೋಪುರ ಶಿಥಿಲಗೊಂಡಿದ್ದರಿಂದ 30 ವರ್ಷಗಳ ಹಿಂದೆಯೇ ಶಬ್ದ ನಿಲ್ಲಿಸಿತ್ತು. ಈಗ ಪಾರಂಪರಿಕ ಗೋಪುರ ಸಂರಕ್ಷಣೆ ಕಾರ್ಯ ನಡೆದಿದ್ದು, ಮುಂದಿನ ತಿಂಗಳಿಂದ ಮತ್ತೆ ಕಾರ್ಯಾರಂಭಗೊಳ್ಳಲಿದ್ದು, ಇದಕ್ಕಾಗಿ ಸಿದ್ಧತೆ ನಡೆದಿದೆ.
ಸ್ಥಗಿತಗೊಂಡಿದ್ದ ಘಂಟೆ: 1927ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ರಜತ ಮಹೋತ್ಸವದ ನೆನಪಿನಲ್ಲಿ ಅರಮನೆ ಸಿಬ್ಬಂದಿ ದೇಣಿಗೆ ಸಂಗ್ರಹಿಸಿ ದೊಡ್ಡ ಗಡಿಯಾರ ನಿರ್ಮಿಸಲಾಗಿತ್ತು. ಅಷ್ಟೇ ಅಲ್ಲದೆ ದೊಡ್ಡ ಗಡಿಯಾರದಲ್ಲಿ ಅಳವಡಿಸಿದ್ದ ಬೃಹತ್ ಗಾತ್ರದ ಘಂಟೆ ಪ್ರತಿ ಗಂಟೆಗೊಮ್ಮೆ ಶಬ್ದ ಮಾಡುತ್ತಿತ್ತು. ಆದರೆ ದೊಡ್ಡ ಗಡಿಯಾರ ಗೋಪುರ ಸೂಕ್ತ ನಿರ್ವಹಣೆ ಇಲ್ಲದೇ ಶಿಥಿಲಗೊಂಡು, ಗೋಪುರದ ಕಮಾನಿಗೆ ಬಳಲಾಗಿದ್ದ ಕಬ್ಬಿಣ ತುಕ್ಕು ಹಿಡಿದಿತ್ತು. ಜತೆಗೆ ಗೋಡೆಗಳಲ್ಲಿ ಬಿರುಕು ಮೂಡಿತ್ತು. ಘಂಟೆ ಬಾರಿಸಿದರೆ ಅದರ ಕಂಪನ, ತರಂಗಗಳಿಂದ ಗೋಪುರದ ಗೋಡೆಗಳಿಗೆ ಮತ್ತಷ್ಟು ಅಪಾಯವಾಗುವ ಸಾಧ್ಯತೆ ಇತ್ತು. ಹೀಗಾಗಿ 1990ರಲ್ಲಿ ಘಂಟೆ ಬಾರಿಸುವುದನ್ನು ಸ್ಥಗಿತಗೊಳಿಸಿ ಗಡಿಯಾರ ಮಾತ್ರ ನಡೆಯುಂತೆ ಮಾಡಲಾಗಿತ್ತು.
ರಾಜಸ್ಥಾನದ ಮರಳು, ಶಿಲೆ ಹಾಗೂ ಸುರ್ಕಿ ಗಾರೆ ಬಳಸಿ ಇದನ್ನು ನಿರ್ಮಿಸಲಾಗಿದೆ. ಒಳಗೆ ತೇಗದ ಮರದಿಂದ ಮಾಡಿದ ಮೆಟ್ಟಿಲುಗಳಿದ್ದು, ಕೆಲವೆಡೆ ದುರಸ್ತಿಗೊಳ್ಳಬೇಕಿದೆ. ನೆಲಮಟ್ಟದಲ್ಲಿ ಹೆಗ್ಗಣಗಳು ಬಿಲ ತೋಡಿ ಕಟ್ಟಡವನ್ನು ಮತ್ತಷ್ಟು ಶಿಥಿಲಗೊಳಿಸಿದ್ದು, ರಾಸಾಯನಿಕ ಬಳಸಿ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕಿದೆ.
ತಾಮ್ರ ತಂತಿ ಕಳವು
ಸಿಡಿಲಿನಿಂದ ರಕ್ಷಣೆಗಾಗಿ ಎರಡು ಇಂಚಿನ ತಾಮ್ರದ ತಂತಿಯನ್ನು ಸುಮಾರು 90 ಅಡಿಯ ಗೋಪುರದಿಂದ ನೆಲಕ್ಕೆ ತಂದು ಹೂಳಲಾಗಿತ್ತು. ಸೂಕ್ತ ರಕ್ಷಣೆ ಇಲ್ಲದ ಕಾರಣ ಈ ತಾಮ್ರದ ತಂತಿಗಳನ್ನು ಕಳ್ಳರು ಕಳವು ಮಾಡಿದ್ದು, ಅದನ್ನು ಮತ್ತೆ ಅಳವಡಿಸುವ ಕಾರ್ಯ ನಡೆದಿದೆ. ಅಂಗಳದ ಕಟ್ಟೆಯೂ ಎರಡು ಕಡೆ ಬಿದ್ದಿದ್ದು. ಅದನ್ನು ನಿರ್ಮಿಸುವ ಕಾರ್ಯ ನಡೆದಿದೆ.
ದುರಸ್ತಿ ಕಾರ್ಯದ ಜವಾಬ್ದಾರಿಯನ್ನು ಪ್ರಾಚ್ಯವಸ್ತು ವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಗೆ ನೀಡಲಾಗಿದೆ. ಕಾಮಗಾರಿಗೆ 43 ಲಕ್ಷ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದ್ದು, ನಗರಪಾಲಿಕೆಯಿಂದ 38 ಲಕ್ಷ ರೂ. ನೀಡಲಾಗಿದೆ.
ಗೋಪುರದ ವೈಶಿಷ್ಟ್ಯ:
ಗೋಪುರದ ಗಡಿಯಾರದ ಕೆಳಭಾಗದಲ್ಲಿ ತಯಾರಿಸಿದ ಕಂಪನಿಯ ಹೆಸರನ್ನು ಫ್ರೆಂಚ್ ಭಾಷೆಯಲ್ಲಿ ಬರೆಯಲಾಗಿದೆ. ಹೂವಿನ ಬಳ್ಳಿಯಿಂದ ಕೂಡಿದ ಸಾಲುಗಳು ಗಂಟೆಯ ಸುತ್ತಲೂ ಇದೆ. ಗಂಟೆಯ ಮೇಲ್ಭಾಗವನ್ನು ತೊಲೆಯೊಂದಕ್ಕೆ ತೂಗುಹಾಕಲಾಗಿದೆ. ಗಂಟೆಯ ಮೇಲ್ಭಾಗದಲ್ಲಿ ಗುಮ್ಮಟವಿದೆ. ಅದರ ಮೇಲೊಂದು ಹೊಂಬಣ್ಣದ ಕಳಶವಿದೆ.
ಕನ್ನಡ ಅಂಕಿ ಅಳವಡಿಕೆ
ಮೊದಲು ನಾಲ್ಕು ದಿಕ್ಕಿನಲ್ಲೂ ರೋಮನ್ ಅಂಕಿಗಳಿದ್ದ ಫಲಕಗಳಿದ್ದವು. 1994ರಲ್ಲಿ ಕನ್ನಡ ಜಾಗೃತಿ ವರ್ಷದ ನೆನಪಿಗಾಗಿ ರೋಮನ್ ಅಂಕಿಗಳನ್ನು ತೆಗೆದು ಕನ್ನಡ ಅಂಕಿಗಳನ್ನು ಅಳವಡಿಸಲಾಯಿತು. ಗಡಿಯಾರದಲ್ಲಿ ಸಮಯ ವ್ಯತ್ಯಾಸವಾದರೆ ಗೋಪುರದ ಒಳಗೆ ಪ್ರವೇಶಿಸಿ ಇದನ್ನು ಸರಿಪಡಿಸಲು ಅವಕಾಶವಿದೆ.
92 ಅಡಿಗಳಷ್ಟು ಎತ್ತರ
1927ರಲ್ಲಿ 72 ಅಡಿಗಳಿದ್ದ ಗೋಪುರವನ್ನು ಈಗ 92 ಅಡಿಗಳಷ್ಟು ಎತ್ತರಿಸಲಾಗಿದೆ. ಗಡಿಯಾರಕ್ಕೆ ವಿದ್ಯುತ್ ಅಳವಡಿಸುವ ಮೂಲಕ ಗಡಿಯಾರ, ಘಂಟೆ ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ. ಗೋಪುರದ ಮಧ್ಯಭಾಗದಲ್ಲಿರುವ ಗಂಡಭೇರುಂಡಕ್ಕೆ ವಿಶೇಷ ದಿವಸಗಳಲ್ಲಿ ದೀಪಾಲಂಕಾರ ಮಾಡಲಾಗುತ್ತದೆ. ‘ಸಿಲ್ವರ್ ಜ್ಯುಬಿಲಿ’ ಕ್ಲಾಕ್‌ಟವರ್ ಎಂದು ಕರೆಯುವ ಈ ಗಡಿಯಾರದ ಇತಿಹಾಸವನ್ನು ಕನ್ನಡ, ಸಂಸ್ಕೃತ, ಇಂಗ್ಲಿಷ್, ಪರ್ಷಿಯನ್ ಭಾಷೆಗಳಲ್ಲಿ ಕೆತ್ತಲಾಗಿದೆ.

ಗೋಪುರವನ್ನು ಕೇವಲ 90 ದಿನಗಳಲ್ಲಿ ನಿರ್ಮಿಸಲಾಗಿದೆ. ಅಂದು ಇದಕ್ಕೆ 7 ಸಾವಿರ ರೂ. ವೆಚ್ಚವಾಗಿತ್ತು. ಗೋಪುರ ಗಡಿಯಾರವನ್ನು ಪ್ರಭವ ಸಂವತ್ಸರ, ಶ್ರಾವಣ ಮಾಸ, ಶುಕ್ಲಪಕ್ಷ, ಸೋಮವಾರ(8.8.1927)ಸ್ಥಾಪಿಸಲಾಗಿದೆ.

ಸೂಕ್ತ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿದ್ದ ಮೈಸೂರಿನ ಪಾರಂಪರಿಕತೆಯ ದೊಡ್ಡಗಡಿಯಾರವನ್ನು ಈಗ ದುರಸ್ತಿಗೊಳಿಸಲಾಗುತ್ತಿದೆ. ಗಡಿಯಾರ ಹಾಗೂ ಘಂಟೆಯನ್ನು ರಿಪೇರಿ ಮಾಡುವ ಕಾರ್ಯ ನಡೆಯುತ್ತಿದ್ದು, ಗೋಪುರದ ಒಳಭಾಗದಲ್ಲಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಪೂರ್ಣಗೊಂಡು ಶೀಘ್ರವೇ ಗಡಿಯಾರ ಹಿಂದಿನಂತೆ ಕಾರ್ಯಾರಂಭವಾಗಲಿದೆ.
ಪ್ರೊ.ಎನ್.ಎಸ್.ರಂಗರಾಜು

ಸದಸ್ಯರು, ಪಾರಂಪರಿಕ ಸಂರಕ್ಷಣಾ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net