

ಬೇಲೂರು: ತಾಲೂಕಿನ ಚೀಕನಹಳ್ಳಿ ರಸ್ತೆಯಲ್ಲಿ ಶುಕ್ರವಾರ ಕಾಡಾನೆಗಳ ಹಿಂಡು ಸಾಗಿದ್ದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತು.
ತಾಲೂಕಿನ ಬಿಕ್ಕೋಡು ಹೋಬಳಿಯಲ್ಲಿ ಕೆಲ ತಿಂಗಳಿಂದ ಬೀಡು ಬಿಟ್ಟಿದ್ದ ಬೀಟಮ್ಮ ಗ್ಯಾಂಗ್‌ನ ಕಾಡಾನೆಗಳ ಹಿಂಡು ಒಂದು ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಚರಿಸುತ್ತಿದ್ದವು. ಈ ಆನೆಗಳನ್ನು ಭದ್ರ ಅಭಯಾರಣ್ಯಕ್ಕೆ ಕಳುಹಿಸುವ ಎಲ್ಲ ಪ್ರಕ್ರಿಯೆಗಳನ್ನು ಅರಣ್ಯ ಇಲಾಖೆಯವರು ಮಾಡಿದರೂ ಅವುಗಳು ಇನ್ನೇನು ಕಾಡಿನೊಳಕ್ಕೆ ಹೋದವು ಎನ್ನುವಷ್ಟರಲ್ಲಿ ಪುನಃ ವಾಪಸ್ ಬರುತ್ತಿದ್ದವು. ಜತೆಗೆ ಹಾಸನ-ಚಿಕ್ಕಮಗಳೂರು ಜಿಲ್ಲೆಯ ಬೇಲೂರು ಮತ್ತು ಮೂಡಿಗೆರೆ ತಾಲೂಕಿನ ವಿವಿಧ ಗ್ರಾಮಗಳ ಗಡಿ ಭಾಗದಲ್ಲಿ ಬೀಡು ಬಿಟ್ಟು ಅತ್ತಿಂದಿತ್ತ, ಇತ್ತಿಂದತ್ತ ಓಡಾಡಿ ಎರಡು ತಾಲೂಕುಗಳ ಅಧಿಕಾರಿ ಮತ್ತು ಸಾರ್ವಜನಿಕರ ನಿದ್ದೆ ಕೆಡಿಸಿದ್ದಲ್ಲದೆ ಬೆಳೆಗಳನ್ನು ನಾಶಪಡಿಸುತ್ತಿದ್ದವು.
ಜತೆಗೆ ಕೆಲ ಕಾಡಾನೆಗಳು ಮನುಷ್ಯರನ್ನು ಕಂಡರೆ ಅವರತ್ತಲೇ ಧಾವಿಸುತ್ತಿದ್ದದ್ದು ಜನರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಗುರುವಾರ ರಾತ್ರಿ ಚಿಕ್ಕಮಗಳೂರು ಜಿಲ್ಲೆ ಗಡಿಭಾಗದಲ್ಲಿದ್ದ ಬೀಟಮ್ಮ ಗ್ಯಾಂಗ್‌ನ 24 ಕಾಡಾನೆಗಳ ಹಿಂಡು ಶುಕ್ರವಾರ ಬೆಳಗ್ಗೆ ಬೇಲೂರು ತಾಲೂಕಿನ ಚೀಕನಹಳ್ಳಿಯ ಮುಖ್ಯರಸ್ತೆಯಲ್ಲಿ ರಸ್ತೆ ದಾಟುತ್ತಿದ್ದವು. ಈ ಸಂದರ್ಭ ಎರಡೂ ಕಡೆಯಿಂದ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತಡೆದಿದ್ದರಿಂದ ಶಾಲಾ, ಕಾಲೇಜುಗಳಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು, ಸಾರ್ವಜನಿಕರು ಅದರಲ್ಲೂ ದ್ವಿತೀಯ ಪಿಯು ಪರೀಕ್ಷೆಗೆಂದು ಹೊರಟಿದ್ದ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಕಾಡಾನೆಗಳ ಹಿಂಡನ್ನು ನೋಡಲು ಮತ್ತು ಫೋಟೋ, ವಿಡಿಯೋ ಮಾಡಲು ಜನರು ಮುಂದೆ ಹೋಗುತ್ತಿದ್ದರಿಂದ ಅರಣ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿತ್ತು. ನಂತರ ಕಾಡಾನೆಗಳ ಹಿಂಡು ಮಾಜಿ ಶಾಸಕ ದಿ.ವೈ.ಎನ್. ರುದ್ರೇಶ್‌ಗೌಡ ಹಾಗೂ ಅವರ ಸಹೋದರ ವೈ.ಎನ್.ಕೃಷ್ಣೇಗೌಡರ ಕಾಫಿ ತೋಟದ ಕೆರೆ ಸಮೀಪ ಬೀಡು ಬಿಟ್ಟಿದ್ದು, ಅರಣ್ಯ ಸಿಬ್ಬಂದಿಯೊಂದಿಗೆ ಸಾರ್ವಜನಿಕರೂ ಸ್ಥಳದಲ್ಲೇ ಉಳಿದು ಕಾಡಾನೆಗಳ ಚಲನವಲನಗಳನ್ನು ಗಮನಿಸುತ್ತಿದ್ದಾರೆ.
ಇದೇ ತಿಂಗಳ 8ರಂದು ಮಹಾಶಿವರಾತ್ರಿ ಇರುವುದರಿಂದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಿಂದ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯಲ್ಲಿ ತೆರಳಲು ಸಾವಿರಾರು ಭಕ್ತರು ಇದೇ ರಸ್ತೆಯಲ್ಲಿ ಸಾಗುತ್ತಾರೆ. ಆದರೆ ತಾಲೂಕಿನ ಕೋಗೋಡು, ಚೀಕನಹಳ್ಳಿ ಭಾಗದ ಮುಖ್ಯರಸ್ತೆ ಅಕ್ಕಪಕ್ಕದಲ್ಲೇ ಕಾಡಾನೆಗಳು ಸಂಚರಿಸುತ್ತಿರುವುದರಿಂದ ಪಾದಯಾತ್ರಿಗಳಿಗೆ ದೊಡ್ಡ ಸಮಸ್ಯೆಯಾಗುತ್ತದೆ.
ಜತೆಗೆ ಯಾವಾಗ ಎಲ್ಲಿ ಕಾಡಾನೆಗಳು ರಸ್ತೆಗಿಳಿಯುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಇದರಿಂದ ಭಕ್ತರ ಪಾದಯಾತ್ರೆಯ ಮಾರ್ಗವನ್ನೇ ಬದಲಿಸಬೇಕಾಗುತ್ತದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ತಕ್ಷಣವೇ ಕಾಡಿಗಟ್ಟುವ ಕೆಲಸ ಮಾಡಬೇಕಿದೆ. ಇಲ್ಲದಿದ್ದಲ್ಲಿ 8 ದಿನಗಳ ಕಾಲ ಸಾಗುವ ಪಾದಯಾತ್ರಿಗಳ ಸುರಕ್ಷತೆಗೆ ಮುಂದಾಗಬೇಕಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳ ಎದುರಿಗೆ ಬಂದ ಆನೆಗಳು: ಚೀಕನಹಳ್ಳಿ ಸಮೀಪದ ಕಲ್ಲುಬಂಡೆ ಗ್ರಾಮದ ನಾಲ್ಕೈದು ವಿದ್ಯಾರ್ಥಿಗಳು ಚೀಕನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಆಗಮಿಸುತ್ತಿದ್ದಾಗ ರಸ್ತೆ ಪಕ್ಕದಲ್ಲಿ ಕಾಡಾನೆಗಳು ವಿದ್ಯಾರ್ಥಿಗಳಿಂದ ಕೆಲವೇ ಅಂತರದಲ್ಲಿದ್ದದ್ದು ನೋಡುಗರ ಎದೆ ನಡುಗಿಸಿತ್ತು. ಸಾರ್ವಜನಿಕರು ಜೋರಾಗಿ ಕೂಗಿಕೊಂಡಿದ್ದರಿಂದ ವಿದ್ಯಾರ್ಥಿಗಳು ತಕ್ಷಣವೇ ಕಾಡಾನೆಗಳನ್ನು ನೋಡಿ ಹಿಂದಕ್ಕೆ ಓಟ ಕಿತ್ತಿದ್ದರಿಂದ ದೊಡ್ಡ ಅನಾಹುತ ತಪ್ಪಿತು.